ಕಾಸರಗೋಡು: ಊರ ತಳಿಯ ತೆಂಗಿನ ಬೆಳೆ ಅಭಿವೃದ್ಧಿಪಡಿಸಿ, ಪೋಷಿಸುವ ನಿಟ್ಟಿನಲ್ಲಿ ಕಲ್ಪ ಗಂಗ ಯೋಜನೆಯನ್ನು ಕೈಗೊಳ್ಳಲು ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕ್ಯಾಂಪಸ್ ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಕೇರಳದ ಸ್ವಂತ ತಳಿಗಳನ್ನು ಕ್ಯಾಂಪಸ್ ವಠಾರದಲ್ಲಿ ನೆಟ್ಟುಬೆಳೆಸುವುದಾಗಿ ಉಪಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ತಿಳಿಸಿದರು.
ಸೋಮವಾರ ಕ್ಯಾಂಪಸ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ, ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಸದಸ್ಯ ಸುರೇಶ್‍ಗೋಪಿ ತೆಂಗಿನ ಸಸಿ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಇದಕ್ಕೂ ಮೊದಲು ಸುರೇಶ್ಗೋಪಿ ಅವರು ಬಿಜೆಪಿಯ ಹಿರಿಯ ಮುಖಂಡ, ದಿ. ಮಡಿಕೈ ಕಮ್ಮಾರನ್ ಸ್ಮರಣಾರ್ಥ ಮಡಿಕೈ ಕಮ್ಮಾರನ್ ಮನೆ ವಠಾರದಲ್ಲಿ ತೆಂಗಿ ಸಸಿ ನೆಡುವುದರ ಜತೆಗೆ 1008 ತೆಂಗಿನ ಸಸಿ ವಿತರಣಾ ಕಾರ್ಯವನ್ನು ನಡೆಸಿದರು. ಇದೇ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ವಿವಿಧ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲೂ ಸುರೇಶ್‍ಗೋಪಿ ಪಾಲ್ಗೊಂಡರು. ಮುಸ್ಲಿಂಲೀಗ್‍ನ ಹಿರಿಯ ಮುಖಂಡ ದಿ. ಚೆರ್ಕಳಂ ಅಬ್ದುಲ್ಲ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಮನೆ ವಠಾರದಲ್ಲಿ ದಿ. ಚೆರ್ಕಳಂ ಅಬ್ದುಲ್ಲ ಅವರ ಸ್ಮರಣಾರ್ಥ ತೆಂಗಿನ ಸಸಿಯನ್ನು ನೆಟ್ಟರು. ಈ ಸಂದರ್ಭ ಶ್ರೀಎಡನೀರು ಮಠಕ್ಕೆ ಭೇಟಿ ನೀಡಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಅನುಗ್ರಹ ಪಡೆದರು. ಕೃಷ್ಣೈಕ್ಯರಾದ ಹಿರಿಯ ಸ್ವಾಮೀಜಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಸ್ಮರಣಾರ್ಥ ಮಠದ ವಠಾರದಲ್ಲಿ ತೆಂಗಿನ ಸಸಿಯನ್ನು ನೆಟ್ಟರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸೇರಿದಂತೆ ಹಲವು ಕೇಂದ್ರಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




