ಕಾಸರಗೋಡು: ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಎದುರ್ತೋಡು ವರೆಗಿನ ಶೋಚನೀಯಾವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಚೆಂಗಳ ಪಂಚಾಯಿತಿ ಸಮಿತಿ ವತಿಯಿಂದ ಬರಿಗಾಲಲ್ಲಿ ಶಿಥಿಲ ರಸ್ತೆಯಲ್ಲಿ ನಡೆಯುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಡಿಗೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಅಂತಾರಾಜ್ಯ ಸಂಪರ್ಕದ ಪ್ರಸಕ್ತ ರಸ್ತೆಯ ಶೋಚನೀಯಾವಸ್ಥೆಗೆ ರಾಜ್ಯವನ್ನು ಅದಲುಬದಲಾಗಿ ಆಡಳಿತ ನಡೆಸುತ್ತಿರುವ ಐಕ್ಯರಂಗ-ಎಡರಂಗಗಳು ಮುಖ್ಯ ಕಾರಣವಾಗಿದ್ದು, ರಸ್ತೆ ದುರಸ್ತಿ ವಿಚಾರದಲ್ಲಿ ಕಾಸರಗೋಡು ಶಾಸಕರೂ ಸಂಪೂರ್ಣ ವಿಫಲರಾಗಿರುವುದಗಿ ದೂರಿದರು. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಶಿಥಿಲಗೊಂಡಿರುವ ರಸ್ತೆ ಕಾಮಗಾರಿ ಶೀಘ್ರ ನೆರವೇರಿಸದಿದ್ದಲ್ಲಿ, ಪಕ್ಷದ ವತಿಯಿಂದ ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಎದುರ್ತೋಡಿನಿಂದ ಎಡನೀರು ವರೆಗೆ ಜಾಥಾ ನಡೆಯಿತು.
ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಪಿ. ಆರ್ ಸುನಿಲ್, ಚೆಂಗಳ ಪಂಚಾಯಿತಿ ಸಮಿತಿ ಅಧ್ಯಕ್ಷ ಜಯಚಂದ್ರ ಬಾಲನಡ್ಕ, ರಮೇಶ್ ಮಾವಿನಕಟ್ಟೆ ಕಾಲ್ನಡಿಗೆ ಪ್ರತಿಭಟನಾ ಜಾಥಾಕ್ಕೆ ನೇತೃತ್ವ ನೀಡಿದರು.




