HEALTH TIPS

ಮುಲ್ಲಪೆರಿಯಾರ್ ಅಣೆಕಟ್ಟು ಶಿಥಿಲಗೊಂಡಿದೆ, ಹೊಸದರ ನಿರ್ಮಾಣ ಅಗತ್ಯ: ಸುಪ್ರೀಂ ಕೋರ್ಟ್ ನಲ್ಲಿ ಕೇರಳದ ಮೊರೆ

                ನವದೆಹಲಿ:ಮುಲ್ಲಪೆರಿಯಾರ್ ಅಣೆಕಟ್ಟು ಅತ್ಯಂತ ದುರ್ಬಲಗೊಂಡಿರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಅದರ ಸ್ಥಾನದಲ್ಲಿ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂದು ಕೇರಳ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.

              126 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದ್ದು,ಅದನ್ನು ತಮಿಳುನಾಡು ಸರಕಾರವು ನಿರ್ವಹಿಸುತ್ತಿದೆ. ಅಕ್ಟೋಬರ್‌ನಲ್ಲಿ ಕೇರಳದಲ್ಲಿ ಭಾರೀ ಮಳೆಯ ಬಳಿಕ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

           ಅಣೆಕಟ್ಟಿನಲ್ಲಿಯ ನೀರಿನ ಮಟ್ಟ 139 ಅಡಿಗಳನ್ನು ದಾಟಲು ಅವಕಾಶ ನೀಡಬಾರದು ಎಂದು ಕೋರಿ ಕೇರಳ ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ. ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಅಣೆಕಟ್ಟಿನಲ್ಲಿಯ ನೀರಿನ ಮಟ್ಟಕ್ಕೆ 142 ಅಡಿಗಳ ಮಿತಿಯನ್ನು ನಿಗದಿಗೊಳಿಸಿತ್ತು. ಜಲಾಶಯದಲ್ಲಿ ಉಳಿಸಿಕೊಳ್ಳಬಹುದಾದ ನೀರಿನ ಗರಿಷ್ಠ ಮಟ್ಟವನ್ನು ನಿರ್ಧರಿಸಲು ಉಸ್ತುವಾರಿ ಸಮಿತಿಯೊಂದನ್ನೂ ಅದು ನೇಮಕಗೊಳಿಸಿತ್ತು.

                 ಬುಧವಾರ ವಿಚಾರಣೆ ಸಂದರ್ಭದಲ್ಲಿ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಉಸ್ತುವಾರಿ ಸಮಿತಿಯು ತಿಳಿಸಿತು. ಇದನ್ನು ವಿರೋಧಿಸಿದ ಕೇರಳ,ಈ ವಾರ ಆರಂಭವಾಗಲಿರುವ ಮಳೆಯು ಅಣೆಕಟ್ಟಿನಲ್ಲಿ ನೀರಿನ ಒಳಹರಿವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಹೀಗಾಗಿ ಅಣೆಕಟ್ಟಿನಿಂದ ಗರಿಷ್ಠ ಸಾಧ್ಯ ಮಟ್ಟದಲ್ಲಿ ನೀರನ್ನು ಹೊರಬಿಡಬೇಕು ಎಂಬ ತನ್ನ ನಿಲುವನ್ನು ಪುನರುಚ್ಚರಿಸಿತು.

          ವಿಶಾಲ ಜಲಾನಯನ ಪ್ರದೇಶ ಮತ್ತು ಸೀಮಿತ ದಾಸ್ತಾನು ಸಾಮರ್ಥ್ಯದಿಂದಾಗಿ ಅಣೆಕಟ್ಟು ಅತ್ಯಂತ ಸುಲಭಭೇದ್ಯವಾಗಿದೆ. ಅಣೆಕಟ್ಟು ಒಡೆದರೆ ಮಾನವ ಪರಿಹಾರಕ್ಕೆ ಮೀರಿದ ವಿನಾಶಗಳನ್ನು ಎದುರಿಸಬೇಕಾಗುತ್ತದೆ. ಅಣೆಕಟ್ಟಿನ ಕೆಳಪಾತ್ರದಲ್ಲಿಯ ಐದು ಜಿಲ್ಲೆಗಳ 30 ಲಕ್ಷಕ್ಕೂ ಅಧಿಕ ಜನರ ಜೀವ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ಕಳವಳಗಳಿಗೆ ಸೂಕ್ತ ಮಹತ್ವ ಮತ್ತು ಪರಿಗಣನೆಯನ್ನು ನೀಡಬೇಕು ಎಂದು ಹೇಳಿದ ಕೇರಳ ಸರಕಾರವು,ತಮಿಳುನಾಡಿಗೆ ನೀರು ಪೂರೈಕೆ ಮತ್ತು ಕೆಳಪಾತ್ರಗಳಲ್ಲಿಯ ಜನರ ಸುರಕ್ಷತೆಯನ್ನು ಖಚಿತಪಡಿಸಲು ಈಗಿರುವ ಅಣೆಕಟ್ಟಿನ ಬದಲಿಗೆ ಹೊಸದನ್ನು ನಿರ್ಮಿಸುವುದು ತಾರ್ಕಿಕವಾದ ಮುಂದಿನ ಹೆಜ್ಜೆಯಾಗಿದೆ ಎಂದು ತಿಳಿಸಿತು.

ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡುವಂತೆ ಕೇರಳದ ಮುಖ್ಯಮಂತ್ರಿ ಪಿ.ವಿಜಯನ್ ಅವರು ರವಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಆಗ್ರಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries