ನವದೆಹಲಿ: ಭಾರತದಲ್ಲಿ 100 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ವಿತರಣೆಯ ಹೊಸ ದಾಖಲೆಯನ್ನು ಸೃಷ್ಟಿಯಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದಾರೆ.
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಆರಂಭಿಸಿ 279 ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ್ದು, ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಲಸಿಕೆ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿದರು.
ಶುಕ್ರವಾರ ದೇಶವನ್ನು ಉದ್ದೇಸಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 130 ಕೋಟಿ ಜನರಿಗೆ ಕೊವಿಡ್-19 ಲಸಿಕೆಯ ವಿತರಣೆ ಹೇಗೆ ಸಾಧ್ಯ ಎಂಬುವವರ ಪ್ರಶ್ನೆಗೆ ಭಾರತೀಯರು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. ಕೊರೊನಾವೈರಸ್ ವಿರುದ್ಧದ ಭಾರತೀಯರ ಹೋರಾಟ ಯಶಸ್ವಿಯಾಗಿದೆ ಎಂದ ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯರನ್ನು ಅಭಿನಂದಿಸಿದರು.
ಜಗತ್ತಿನ ಎದುರು ಭಾರತ ಮಾದರಿ:
"ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಔರ್ ಸಬ್ ಕಾ ವಿಕಾಸ್" ಬಗ್ಗೆ ತಮ್ಮ ಬಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾವೈರಸ್ ವಿರುದ್ಧ ಭಾರತೀಯರು ಒಗ್ಗಟ್ಟಿನಿಂದ ಹೋರಾಡಿದೆ. ಪ್ರಜಾಪ್ರಭತ್ವ ರಾಷ್ಟ್ರದಲ್ಲಿ ಪ್ರಜೆಗಳು ಒಗ್ಗಟ್ಟಾಗಿದ್ದರೆ ಎಂಥ ಕಾರ್ಯವನ್ನಾದರೂ ಸಾಧಿಸಬಹುದು ಎಂದು ಭಾರತೀಯರು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಆ ಮೂಲಕ ವಿಶ್ವದ ಎದುರಿನಲ್ಲಿ ಭಾರತವು ಮಾದರಿಯಾಗಿ ನಿಂತಿದೆ ಎಂದು ಹೇಳಿದರು.
ಭಾರತೀಯರೆಲ್ಲರಿಗೂ ಉಚಿತ ಲಸಿಕೆ:
"ದೇಶದ ಮಹಾನಗರ, ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಉಚಿತವಾಗಿ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಮಾಡಲಾಗಿದೆ. ಕೊವಿಡ್-19 ಲಸಿಕೆ ವಿತರಣೆಯಲ್ಲಿ ಶ್ರೀಮಂತ, ಬಡವ ಎಂಬ ಯಾವುದೇ ಭೇದ ಭಾವವನ್ನು ಮಾಡಿಲ್ಲ. ದೇಶದಲ್ಲಿ ಇದುವೆರಗೂ ಯಾರೂ ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡಿಲ್ಲವೋ ಅವರು ತಕ್ಷಣವೇ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಯಾರು ಲಸಿಕೆಯನ್ನು ಪಡೆದುಕೊಂಡಿದ್ದೀರೋ ಅವರು ಬೇರೆಯವರಿಗೆ ಲಸಿಕೆ ಪಡೆದುಕೊಳ್ಳಲು ಪ್ರರೇಪಣೆ ನೀಡಿರಿ. ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಕಾಣುತ್ತೇವೆ ಎಂಬ ವಿಶ್ವಾಸ ನನಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
9 ತಿಂಗಳಿನಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ:
ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ 9 ತಿಂಗಳಿನಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಮೂಲಕ ಜಗತ್ತಿನಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಕ್ಟೋಬರ್ 21ರ ರಾತ್ರಿ 7 ಗಂಟೆ ವೇಳೆಗೆ 1,00,53,63,691 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು ಲಸಿಕೆ ವಿತರಿಸಿದ ದೇಶದ ಟಾಪ್-5 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶುಭಾಶಯ:
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಭಾರತದ ನಾಗರಿಕರಿಗೆ ಸಮಾನ ಲಸಿಕೆ ವಿತರಿಸಿದ್ದಕ್ಕಾಗಿಗಿ ಪ್ರಧಾನಿ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದರು. "ಪ್ರಧಾನಮಂತ್ರಿ ನರೇಂದ್ರಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನರು, COVID19 ನಿಂದ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ಮತ್ತು ವ್ಯಾಕ್ಸಿನ್ ಇಕ್ವಿಟಿ ಗುರಿಗಳನ್ನು ಸಾಧಿಸಲು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು" ಎಂದು ಅವರು ಟ್ವೀಟ್ ಮಾಡಿದ್ದರು.




