ನವದೆಹಲಿ, ಅಕ್ಟೋಬರ್ 28: ಭಾರತದಲ್ಲಿ ಭಾರೀ ಗದ್ದಲ ಹಬ್ಬಿಸಿದ್ದ ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿದೆ. ಈ ನಡುವೆ "ಪೆಗಾಸಸ್ ಸ್ಪೈವೇರ್ ಅನ್ನು ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುತ್ತದೆ," ಎಂದು ಭಾರತದಲ್ಲಿ ಹೊಸದಾಗಿ ನೇಮಕಗೊಂಡ ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ.
"ಈ ಪೆಗಾಸಸ್ ಸ್ಪೈವೇರ್‌ನ ಮಾಲಿಕತ್ವ ಹೊಂದಿರುವ ಎನ್‌ಎಸ್‌ಒ ಸಂಸ್ಥೆಯು ಈ ಸ್ಪೈವೇರ್ ಅನ್ನು ಸರ್ಕಾರೇತರರಿಗೆ ಮಾರಾಟ ಮಾಡುವುದಿಲ್ಲ," ಎಂದು ಹೇಳಿರುವ ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಇದೇ ಸಂದರ್ಭದಲ್ಲಿ "ಈ ಪೆಗಾಸಸ್ ಬೇಹುಗಾರಿಕೆ ಪ್ರಕರಣ ಭಾರತದ ಆಂತರಿಕ ವಿಚಾರ," ಎಂದಿದ್ದಾರೆ.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾಧ್ಯಮಗಳು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಅನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸಲಾಗಿದೆ, ಈ ವಿಚಾರದಲ್ಲಿ ಭಾರತ ಸರ್ಕಾರವು ಇಸ್ರೇಲ್ ಅನ್ನು ಸಂಪರ್ಕಿಸಿದೆಯೇ ಎಂದು ಪ್ರಶ್ನಿಸಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಇಸ್ರೇಲಿ ರಾಯಭಾರಿ ನೌರ್ ಗಿಲೋನ್, "ಪೆಗಾಸಸ್ ಸ್ಪೈವೇರ್ ಅನ್ನು ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುತ್ತದೆ," ಎಂದು ಉತ್ತರಿಸಿದ್ದಾರೆ.
"ಪೆಗಾಸಸ್ ವಿಚಾರದಲ್ಲಿ ಭಾರತದಲ್ಲಿ ಏನು ನಡೆಯುತ್ತಿದೆಯೋ ಅದು ಭಾರತದ ಆಂತರಿಕ ವಿಚಾರ. ನಾನು ಈ ವಿಚಾರದಲ್ಲಿ ಅತೀ ವಿವರವಾಗಿ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಎನ್‌ಎಸ್‌ಒ ಒಂದು ಖಾಸಗಿ ಇಸ್ರೇಲಿ ಸಂಸ್ಥೆ. ಎನ್‌ಎಸ್‌ಒ ಅಥವಾ ಅಂತಹ ಯಾವುದೇ ಕಂಪನಿಗಳು ಯಾವುದೇ ರಫ್ತು ಮಾಡುವುದಾದರೂ ಇಸ್ರೇಲ್ ಸರ್ಕಾರದ ರಫ್ತು ಪರವಾನಗಿ ಪಡೆಯುವುದು ಅಗತ್ಯ. ಸರ್ಕಾರಗಳಿಗೆ ರಫ್ತು ಮಾಡುವುದಾದರೆ ಮಾತ್ರ ನಾವು ಅನುಮತಿಯನ್ನು ನೀಡುತ್ತೇವೆ," ಎಂದು ತಿಳಿಸಿದರು.
ಸರ್ಕಾರಕ್ಕೆ ರಫ್ತು ಮಾಡಲು ಮಾತ್ರ ಅನುಮತಿ
"ಸರ್ಕಾರಗಳಿಗೆ ಅಲ್ಲದೇ ಬೇರೆ ಯಾರಿಗೂ ಸ್ಪೈವೇರ್‌ಗಳ ಮಾರಾಟಕ್ಕೆ ಇಸ್ರೇಲ್ ಸರ್ಕಾರ ಅನುಮತಿ ನೀಡುವುದಿಲ್ಲ. ರಫ್ತಿಗೆ ಸರ್ಕಾರದ ಅನುಮತಿ ಅತ್ಯವಶ್ಯ. ಸರ್ಕಾರೇತರರಿಗೆ ರಫ್ತು ಅಥವಾ ಮಾರಾಟ ಮಾಡಲು ಅವಕಾಶವನ್ನು ನೀಡಲಾಗುವುದಿಲ್ಲ. ಇಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಆಂತರಿಕ ವಿಚಾರ," ಎಂದು ಸ್ಪಷ್ಟಪಡಿಸಿದರು.
ಅನೇಕ ಭಾರತೀಯ ಸಚಿವರು, ರಾಜಕಾರಣಿಗಳು, ಕಾರ್ಯಕರ್ತರು, ಉದ್ಯಮಿಗಳು ಮತ್ತು ಪತ್ರಕರ್ತರುಗಳ ಫೋನ್ ಟ್ಯಾಪ್ ಮಾಡಲು ಇಸ್ರೇಲಿ ಸಂಸ್ಥೆ ಎನ್‌ಎಸ್‌ಒನ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಈ ಬಗ್ಗೆ ತನಿಖೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿದೆ.
ಭಾರತ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿ ಈ ಪೆಗಾಸಸ್ ಸ್ಪೈವೇರ್ ಬಳಕೆಯ ಬಗ್ಗೆ ತನಿಖೆ ನಡೆಲಸಾಗುತ್ತಿದೆ. ಜೂನ್ 18 ರಂದು ದಿ ವೈರ್ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಲಾಗಿದೆ ಎಂದು ಆರೋಪ ಮಾಡಿ ಮಾಧ್ಯಮಗಳು ವರದಿ ಮಾಡಿದೆ. ಈ ವರದಿ ಬಿತ್ತರವಾದ ಕೆಲವೇ ನಿಮಿಷಗಳ ಒಳಗೆ ಸರ್ಕಾರ ಇದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು ಈ ಆರೋಪ ಸುಳ್ಳು, ಆಧಾರರಹಿತ ಎಂದು ಹೇಳಿಕೊಂಡಿದೆ. ಈ ನಡುವೆ ಎನ್‌ಎಸ್‌ಒ "ನಾವು ನಮ್ಮ ಸಾಫ್ಟ್‌ವೇರ್‌ಗಳನ್ನು ಅಧಿಕೃತ ಸರ್ಕಾರಕ್ಕೆ ಮಾತ್ರ ಮಾರಾಟ ಮಾಡುತ್ತೇವೆ," ಎಂದು ಹೇಳಿದ್ದು ಇದು ಪೆಗಾಸಸ್ ವಿಚಾರದಲ್ಲಿ ಸರ್ಕಾರದ ವಿರುದ್ದ ವಿರೋಧ ಪಕ್ಷಗಳ ಹೋರಾಟಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತೆ ಆಗಿದೆ.
ವಿರೋಧ ಪಕ್ಷಗಳು ಈ ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಗೆ ಸಮಿತಿ ರಚನೆ ಮಾಡಿರುವುದನ್ನು ಸ್ವಾಗತ ಮಾಡಿರುವ ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ, "ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಆದೇಶಿಸುವ ಮೂಲಕ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಪೆಗಾಸಸ್ ಬಹುಗಾರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳ ನಿಲುವು ಸಮರ್ಥವಾಗಿದೆ ಎಂಬುವುದು ಸ್ಪಷ್ಟವಾಗಿದೆ," ಎಂದು ಹೇಳಿದ್ದಾರೆ.



