ನವದೆಹಲಿ: ಮಕ್ಕಳ ಮೇಲೆ ಕೋವ್ಯಾಕ್ಸಿಲ್ ಲಸಿಕೆ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿದೆ.
12 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಸಲಾಗಿತ್ತು, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇದೀಗ ಸಲ್ಲಿಕೆ ಮಾಡಲಾಗಿದೆ. ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಹಾಗೂ ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡಲಿದೆ ಎಂದು ವರದಿಯಾಗಿತ್ತು.
ಮಕ್ಕಳಲ್ಲಿ ಕೋವಿಡ್ 19 ಸೋಂಕು ಹೆಚ್ಚುವ ಭೀತಿಯ ನಡುವೆಯೇ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸುವ ಚಟುವಟಿಕೆಗಳು ನಡೆಯುತ್ತಿವೆ. ಕೆಲವು ನಗರಗಳಲ್ಲಿ ಈ ಪ್ರಯೀಗ ಯಶಸ್ವಿಯಾಗಿ ನಡೆಯುತ್ತಿದೆ.
ಆದರೆ, ಲಸಿಕೆ ಪ್ರಯೋಗಕ್ಕೆ ತಮ್ಮ ಮಕ್ಕಳನ್ನು ಒಳಪಡಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಬಿಹಾರದ ಪಟ್ನಾದಲ್ಲಿರುವ ಏಮ್ಸ್ ವೈದ್ಯರು ತಮ್ಮ ಮಕ್ಕಳನ್ನೇ ಪ್ರಯೋಗಕ್ಕೆ ಕರೆತರುತ್ತಿದ್ದಾರೆ.
ಜನರಲ್ಲಿ ಲಸಿಕೆ ಕುರಿತಾದ ಹಿಂಜರಿಕೆಯನ್ನು ಹೋಗಲಾಡಿಸಲು ವೈದ್ಯರು ತಮ್ಮ ಮಕ್ಕಳನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸುವ ಮೂಲಕ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್ ರೂಪಾಂತರದಿಂದ ಉಂಟಾಗಲಿರುವ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಮಾರಕವಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪ್ರತಿರಕ್ಷಣಾ ಶಕ್ತಿ ಹೆಚ್ಚಿಸುವ ಸಲುವಾಗಿ ಭಾರತ್ ಬಯೋಟೆಕ್‌ನ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ.
ಮಕ್ಕಳ ಮೇಲಿನ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದ ಮೊದಲ ಹಂತದಲ್ಲಿ 12-18 ವರ್ಷ ವಯಸ್ಸಿನ 20 ಮಕ್ಕಳಿಗೆ ಲಸಿಕೆಗಳನ್ನು ನೀಡಲಾಗಿದೆ ಎಂದು ಪಟ್ನಾ ಏಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಜೂನ್ 2ರಿಂದ ಮಕ್ಕಳ ಮೇಲೆ ಪ್ರಯೋಗಿಸುವ ಚಟುವಟಿಕೆಯನ್ನು ಆರಂಭಿಸಿದೆ.
ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಕ್ಕಳ ಮೇಲೆ ಲಸಿಕೆ ಬಳಕೆಗೆ ಅನುಮೋದನೆ ನೀಡಿಲ್ಲ. ಕಳೆದ ತಿಂಗಳು ಅಮೆರಿಕ ಹಾಗೂ ಕೆನಡಾಗಳು ಫೈಜರ್-ಬಯೋಎನ್‌ಟೆಕ್ ಲಸಿಕೆಯನ್ನು ಕೆಲವು ವಯೋಮಾನದ ಮಕ್ಕಳಿಗೆ ನೀಡಲು ಅನುಮತಿ ನೀಡಿತ್ತು. ಚೀನಾದಲ್ಲಿ ಮೂರು ವರ್ಷದ ಮಕ್ಕಳಿಗೂ ಲಸಿಕೆ ನೀಡುವುದನ್ನು ಆರಂಭಿಸಲಾಗಿದೆ.
ಮೂರನೇ ಅಲೆಯು ಮಕ್ಕಳಿಗೆ ಅಪಾಯಕಾರಿಯಾಗಲಿದೆ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಸೃಷ್ಟಿಸುವತ್ತ ಗಮನ ಹರಿಸಲಾಗಿದೆ. ಅನೇಕ ರಾಜ್ಯಗಳು ಮಕ್ಕಳಿಗಾಗಿ ವಿಶೇಷ ತೀವ್ರ ನಿಗಾ ಘಟಕಗಳನ್ನು ಕೂಡ ಘೋಷಿಸಿವೆ.
12 ರಿಂದ 18 ವರ್ಷದೊಳಗಿನ ಮಕ್ಕಳಿಂದ ರಕ್ತದ ಮಾದರಿಯನ್ನ ಸಂಗ್ರಹಿಸಲಾಗಿದೆ. 50 ಸ್ವಯಂಸೇವಕರ ತಪಾಸಣೆ ನಡೆಸಲಾಗಿದ್ದು, ರಕ್ತ ಮಾದರಿಯ ವರದಿ ಬಂದ ನಂತರ ಕ್ಲಿನಿಕಲ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಲಸಿಕೆ ನೀಡುವ ಮೊದಲು ಎಲ್ಲಾ ಮಕ್ಕಳಿಗೂ ಜಿಲ್ಲಾಡಳಿತ ಸಲಹೆ, ಮಾರ್ಗದರ್ಶನ ಮಾಡಲಿದೆ, ಲಸಿಕೆ ಪಡೆದ ಬಳಿಕ ಆಯಂಟಿಬಾಡಿ ಪರೀಕ್ಷೆಗೂ ಒಳಗಾಗುತ್ತಾರೆ ಎಂದು ತಿಳಿಸಲಾಗಿತ್ತು.
ವ್ಯಾಕ್ಸಿನೇಷನ್ ಪ್ರಯೋಗ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುತ್ತದೆ. ಬಳಿಕ 6-12 ವರ್ಷದವರಿಗೆ ಹಾಗೂ ಕೊನೆಯಲ್ಲಿ 2-6 ವರ್ಷದ ಮಕ್ಕಳಿದ್ದರೆ ಅವರಿಗೂ ನೀಡಲಾಗುತ್ತದೆ. ಆ ಬಳಿಕ ಉತ್ತಮ ಫಲಿತಾಂಶ ಬಂದರೆ ಅಂತಹ ಮಕ್ಕಳಿಗೆ 28 ದಿನದ ಬಳಿಕ 2ನೇ ಡೋಸ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.




