ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ನಿರ್ಮಾಣದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಮತ್ತು ಜಾಗತಿಕ ಜವಳಿ ನಕ್ಷೆಯಲ್ಲಿ ಭಾರತವನ್ನು ಬಲಿಷ್ಠ ಸ್ಥಾನದಲ್ಲಿ ಕೂರಿಸಲು, 2021- 22ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಿರುವಂತೆ 7 ಪಿಎಂ ಮಿತ್ರ ಉದ್ಯಾನಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.
ಪಿಎಂ ಮಿತ್ರ, ಪ್ರಧಾನಮಂತ್ರಿಯವರ 5ಎಫ್ ದೃಷ್ಟಿಕೋನದಿಂದ ಪ್ರೇರಿತವಾಗಿದೆ. '5ಎಫ್' ಸೂತ್ರವು - ಫಾರ್ಮ್ ಟು ಫೈಬರ್ (ಜಮೀನಿನಿಂದ ಎಳೆಯವರೆಗೆ), ಫೈಬರ್ ಟು ಫ್ಯಾಕ್ಟರಿ (ಎಳೆಯಿಂದ ಕಾರ್ಖಾನೆವರೆಗೆ), ಫ್ಯಾಕ್ಟರಿ ಟು ಫ್ಯಾಷನ್ (ಕಾರ್ಖಾನೆಯಿಂದ ವಿನ್ಯಾಸದವರೆಗೆ), ಫ್ಯಾಷನ್ ಟು ಫಾರೀನ್ (ವಿನ್ಯಾಸದಿಂದ ವಿದೇಶದವರೆಗೆ) ಒಳಗೊಂಡಿದೆ.
ಈ ಸಮಗ್ರ ದೃಷ್ಟಿಕೋನವು ಆರ್ಥಿಕತೆಯಲ್ಲಿ ಜವಳಿ ವಲಯದ ಬೆಳವಣಿಗೆಯನ್ನು ಮುಂದುವರಿಸಲು ನೆರವಾಗುತ್ತದೆ. ಬೇರೆ ಯಾವುದೇ ಸ್ಪರ್ಧಾತ್ಮಕ ರಾಷ್ಟ್ರವು ನಮ್ಮಂತಹ ಸಂಪೂರ್ಣ ಜವಳಿ ಪರಿಸರ ವ್ಯವಸ್ಥೆಯನ್ನು ಹೊಂದಿಲ್ಲ. ಎಲ್ಲಾ ಐದು ಎಫ್‌ಗಳಲ್ಲಿ ಭಾರತ ಪ್ರಬಲವಾಗಿದೆ.
7 ಬೃಹತ್ ಸಮಗ್ರ ಜವಳಿ ಪ್ರದೇಶ ಮತ್ತು ಉಡುಪು ಉದ್ಯಾನಗಳನ್ನು (ಪಿಎಂ ಮಿತ್ರ) ವಿವಿಧ ಇಚ್ಛೆ ವ್ಯಕ್ತಪಡಿಸುವ ರಾಜ್ಯಗಳಲ್ಲಿರುವ ಗ್ರೀನ್ ಫೀಲ್ಡ್ (ಹಸಿರು ವಲಯ) / ಬ್ರೌನ್ ಫೀಲ್ಡ್ (ಕಂದು ವಲಯ) ತಾಣಗಳಲ್ಲಿ ಸ್ಥಾಪನೆ ಮಾಡಲಾಗುವುದು. ಅಕ್ಕಪಕ್ಕದ ಮತ್ತು ಋಣಭಾರ ರಾಹಿತ್ಯದ 1,000+ ಎಕರೆಗಳ ಭೂಭಾಗ ಮತ್ತು ಇತರ ಜವಳಿ ಸಂಬಂಧಿತ ಸೌಲಭ್ಯಗಳು ಮತ್ತು ಪರಿಸರ ವ್ಯವಸ್ಥೆಯ ಸಿದ್ಧ ಲಭ್ಯತೆಯನ್ನು ಹೊಂದಿರುವ ರಾಜ್ಯ ಸರ್ಕಾರಗಳ ಪ್ರಸ್ತಾಪಗಳು ಸ್ವಾಗತಾರ್ಹವಾಗಿರುತ್ತವೆ.
ಕೈಗಾರಿಕಾ ಎಸ್ಟೇಟ್ ಅಭಿವೃದ್ಧಿಗೆ 1,000 ಎಕರೆ ಭೂಮಿಎಲ್ಲಾ ಹಸಿರು ವಲಯ ಪಿಎಂ ಮಿತ್ರಗೆ 500 ಕೋಟಿ ರೂ. ಗರಿಷ್ಠ ಅಭಿವೃದ್ಧಿ ಬಂಡವಾಳ ಬೆಂಬಲ (ಡಿಸಿಎಸ್) ಮತ್ತು ಕಂದು ವಲಯದ ಪಿಎಂ ಮಿತ್ರಗೆ ಗರಿಷ್ಠ 200 ಕೋಟಿ ರೂ., ಸಾಮಾನ್ಯ ಮೂಲಸೌಕರ್ಯ (ಯೋಜನಾ ವೆಚ್ಚದ ಶೇ.30) ಅಭಿವೃದ್ಧಿಗೆ ಮತ್ತು 300 ಕೋಟಿ ರೂ. ಸ್ಪರ್ಧಾತ್ಮಕತೆ ಪ್ರೋತ್ಸಾಹಕ ಬೆಂಬಲ (ಸಿಐಎಸ್) ವನ್ನು ಪಿಎಂ ಮಿತ್ರದಲ್ಲಿ ಜವಳಿ ಉತ್ಪಾದನಾ ಘಟಕಗಳನ್ನು ಶೀಘ್ರ ಸ್ಥಾಪಿಸಲು ಪ್ರತಿ ಪಿಎಂ ಮಿತ್ರ ಉದ್ಯಾನವನಕ್ಕೆ ಒದಗಿಸಲಾಗುವುದು. ರಾಜ್ಯ ಸರ್ಕಾರದ ಬೆಂಬಲವು ವಿಶ್ವದರ್ಜೆಯ ಕೈಗಾರಿಕಾ ಎಸ್ಟೇಟ್ ಅಭಿವೃದ್ಧಿಗೆ 1,000 ಎಕರೆ ಭೂಮಿಯನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ.
ಹಸಿರು ವಲಯ ಪಿಎಂ ಮಿತ್ರ ಉದ್ಯಾನಕ್ಕಾಗಿ, ಭಾರತ ಸರ್ಕಾರ ನೀಡುವ ಅಭಿವೃದ್ಧಿ ಬಂಡವಾಳ ಬೆಂಬಲ ಯೋಜನೆ ವೆಚ್ಚದ ಶೇ.30 ಆಗಿರುತ್ತದೆ. ಇದಕ್ಕೆ 500 ಕೋಟಿ ರೂ. ಮಿತಿಯೂ ಇರುತ್ತದೆ. ಕಂದು ವಲಯ ಜಮೀನುಗಳಿಗೆ, ಮೌಲ್ಯಮಾಪನದ ನಂತರ, ಅಭಿವೃದ್ಧಿ ಬಂಡವಾಳ ಬೆಂಬಲವು ಸಮತೋಲನ ಮೂಲಸೌಕರ್ಯ ಮತ್ತು ಇತರ ಬೆಂಬಲ ಸೌಲಭ್ಯಗಳ ಯೋಜನಾ ವೆಚ್ಚದ ಶೇ.30ರಷ್ಟನ್ನು ಅಭಿವೃದ್ಧಿಪಡಿಸಬೇಕು ಮತ್ತು 200 ಕೋಟಿ ರೂ.ಗಳ ಮಿತಿಗೆ ಸೀಮಿತವಾಗಿರುತ್ತದೆ. ಇದು ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಯೋಜನೆಯನ್ನು ಆಕರ್ಷಕಗೊಳಿಸಲು ಕಾರ್ಯಸಾಧ್ಯತೆ ಅಂತರದ ಧನ ಸಹಾಯದ ರೂಪದಲ್ಲಿರುತ್ತದೆ.
ಪಿಎಂ ಮಿತ್ರ ಉದ್ಯಾನಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ
1. ಪ್ರಮುಖ ಮೂಲಸೌಕರ್ಯ: ಇನ್ ಕ್ಯುಬೇಶನ್ ಕೇಂದ್ರ ಮತ್ತು ಪ್ಲಗ್ ಮತ್ತು ಪ್ಲೇ ಸೌಲಭ್ಯ, ಅಭಿವೃದ್ಧಿ ಹೊಂದಿದ ಕೈಗಾರಿಕಾ ತಾಣಗಳು, ರಸ್ತೆಗಳು, ವಿದ್ಯುತ್, ನೀರು ಮತ್ತು ತ್ಯಾಜ್ಯ ನೀರಿನ ವ್ಯವಸ್ಥೆ, ಸಾಮಾನ್ಯ ಸಂಸ್ಕರಣಾ ಗೃಹ ಮತ್ತು ಸಿಇಟಿಪಿ ಮತ್ತು ಇತರ ಸಂಬಂಧಿತ ಸೌಲಭ್ಯಗಳು ಉದಾಹರಣೆಗೆ ವಿನ್ಯಾಸ ಕೇಂದ್ರ, ಪರೀಕ್ಷಾ ಕೇಂದ್ರಗಳು ಇತ್ಯಾದಿ.
2. ಬೆಂಬಲ ಮೂಲಸೌಕರ್ಯ: ಕಾರ್ಮಿಕರ ಹಾಸ್ಟೆಲ್‌ಗಳು ಮತ್ತು ವಸತಿ, ಸಾಗಣೆ ಉದ್ಯಾನ, ಉಗ್ರಾಣ, ವೈದ್ಯಕೀಯ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳು.
ಪಿಎಂ ಮಿತ್ರ ಶುದ್ಧ ಉತ್ಪಾದನಾ ಚಟುವಟಿಕೆಗಾಗಿ ಶೇ.50ರಷ್ಟು ಪ್ರದೇಶ, ಉಪಯುಕ್ತ ಬಳಕೆಗಾಗಿ ಶೇ.20ರಷ್ಟು ಪ್ರದೇಶ ಮತ್ತು ವಾಣಿಜ್ಯ ಅಭಿವೃದ್ಧಿಗಾಗಿ ಶೇ.10ರಷ್ಟು ಪ್ರದೇಶವನ್ನು ಅಭಿವೃದ್ಧಿಪಡಿಸಲಿದೆ. ಪಿಎಂ ಮಿತ್ರದ ರೂಪುರೇಷೆಯ ಪ್ರಾತಿನಿಧ್ಯವನ್ನು ಕೆಳಗೆ ವಿವರಿಸಲಾಗಿದೆ.
ಬೃಹತ್ ಸಮಗ್ರ ಜವಳಿ ವಲಯ ಮತ್ತು ಉಡುಪು ಉದ್ಯಾನಗಳ ಪ್ರಮುಖ ಘಟಕಗಳು ಶೇ.5 ಪ್ರದೇಶವನ್ನು ಸೂಚಿಸುತ್ತವೆ, ಆ ಉದ್ದೇಶಕ್ಕಾಗಿ ಬಳಸುವ ಶೇ.10 ಪ್ರದೇಶವನ್ನು ಸೂಚಿಸುತ್ತದೆ.
ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ ಒಡೆತನ
ಪಿಎಂ ಮಿತ್ರ ಉದ್ಯಾನವನ್ನು ವಿಶೇಷ ಉದ್ದೇಶದ ವಾಹಕ ಅಭಿವೃದ್ಧಿಪಡಿಸಲಿದ್ದು, ಇದು ಸಾರ್ವಜನಿಕ- ಖಾಸಗಿ- ಪಾಲುದಾರಿಕೆ (ಪಿಪಿಪಿ) ವಿಧಾನದಲ್ಲಿ ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ ಒಡೆತನದಲ್ಲಿರುತ್ತದೆ. ಮಾಸ್ಟರ್ ಡೆವಲಪರ್, ಕೈಗಾರಿಕಾ ಉದ್ಯಾನವನ್ನು ಅಭಿವೃದ್ಧಿಪಡಿಸುವುದಲ್ಲದೆ ಬಿಟ್ಟುಕೊಡುವವರೆಗಿನ ಅವಧಿಯಲ್ಲಿ ಅದನ್ನು ನಿರ್ವಹಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಈ ಮಾಸ್ಟರ್ ಡೆವಲಪರ್ ಆಯ್ಕೆ ನಡೆಯಲಿದೆ.
ರಾಜ್ಯ ಸರ್ಕಾರವು ಬಹುಪಾಲು ಮಾಲೀಕತ್ವವನ್ನು ಹೊಂದಿರುವ ಎಸ್‌ಪಿವಿ ಅಭಿವೃದ್ಧಿ ಹೊಂದಿದ ಕೈಗಾರಿಕಾ ತಾಣಗಳಿಂದ ಗುತ್ತಿಗೆ ಬಾಡಿಗೆಯ ಭಾಗವನ್ನು ಪಡೆಯಲು ಅರ್ಹವಾಗಿರುತ್ತದೆ ಮತ್ತು ಪಿಎಂ ಮಿತ್ರ ಉದ್ಯಾನವನ್ನು ವಿಸ್ತರಿಸುವ ಮೂಲಕ, ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಇತರ ಕಲ್ಯಾಣ ಕ್ರಮಗಳನ್ನು ಒದಗಿಸುವ ಮೂಲಕ ಈ ಪ್ರದೇಶದಲ್ಲಿ ಜವಳಿ ಉದ್ಯಮದ ಮತ್ತಷ್ಟು ವಿಸ್ತರಣೆಗೆ ಅದನ್ನು ಬಳಸಲು ಸಾಧ್ಯವಾಗುತ್ತದೆ.
ಆರ್ಥಿಕತೆಯ ಪ್ರಮಾಣ ಸಾಧಿಸಲು ಸಹಾಯ
ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ತೇಜಿಸಲು ಭಾರತ ಸರ್ಕಾರವು ಪ್ರತಿ ಪಿಎಂ ಮಿತ್ರ ಉದ್ಯಾನಕ್ಕೆ 300 ಕೋಟಿ ರೂ. ನಿಧಿಯನ್ನು ಒದಗಿಸುತ್ತದೆ. ಇದನ್ನು ಸ್ಪರ್ಧಾತ್ಮಕತೆ ಪ್ರೋತ್ಸಾಹಕ ಬೆಂಬಲ (ಸಿಐಎಸ್) ಎಂದು ಕರೆಯಲಾಗುತ್ತದೆ ಮತ್ತು ಪಿಎಂ ಮಿತ್ರ ಉದ್ಯಾನದಲ್ಲಿ ಹೊಸದಾಗಿ ಸ್ಥಾಪಿಸಲಾದ ಘಟಕದ ಒಟ್ಟು ವಹಿವಾಟಿನ ಶೇ.3ವರೆಗೆ ಪಾವತಿಸಲಾಗುವುದು. ಅಂತಹ ಬೆಂಬಲವು ಸ್ಥಾಪನೆಯ ಅಡಿಯಲ್ಲಿನ ಹೊಸ ಯೋಜನೆಗೆ ನಿರ್ಣಾಯಕವಾಗಿದೆ. ಅದನ್ನು ಮುರಿಯಲು ಸಹ ಸಾಧ್ಯವಿರುವುದಿಲ್ಲ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ಕಾರ್ಯಸಾಧ್ಯತೆಯನ್ನು ಸ್ಥಾಪಿಸಲು ಸಾಧ್ಯವಾಗುವವರೆಗೆ ಬೆಂಬಲದ ಅಗತ್ಯವಿರುತ್ತದೆ.
ಇತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ ಸೇರಿ, ಆ ಯೋಜನೆಗಳ ಮಾರ್ಗಸೂಚಿಗಳ ಅಡಿಯಲ್ಲಿ ಅರ್ಹತೆಗೆ ಅನುಗುಣವಾಗಿ ಲಭ್ಯವಿರುತ್ತದೆ. ಇದು ಜವಳಿ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಆರ್ಥಿಕತೆಯ ಪ್ರಮಾಣ ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಲಕ್ಷಾಂತರ ಜನರಿಗೆ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆರ್ಥಿಕತೆಗಳ ಪ್ರಮಾಣವನ್ನು ಬಳಸಿಕೊಂಡು, ಈ ಯೋಜನೆಯು ಭಾರತೀಯ ಕಂಪನಿಗಳಿಗೆ ಜಾಗತಿಕ ಚಾಂಪಿಯನ್ ಗಳಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.
ಸಂಕಷ್ಟದ ಸಂದರ್ಭದಲ್ಲಿ ಸ್ವಾವಲಂಬನೆ ಅತ್ಯಗತ್ಯ: ಕರಂದ್ಲಾಜೆ
"ಸ್ವತಃ ನೂಲು ತೆಗೆದು ಬಟ್ಟೆ ತಯಾರಿಸಿ ಸ್ವಾವಲಂಬನೆಗೆ ಗಾಂಧೀಜಿ ಮಹತ್ವ ನೀಡಿದ್ದರು. ಸ್ವದೇಶೀ ವಸ್ತುಗಳ ಬಳಕೆಗೆ ಕರೆ ನೀಡಿ ಜನರಲ್ಲಿ ಸ್ವದೇಶಿ ಚಿಂತನೆಗೆ ಜಾಗೃತಿ ಮೂಡಿಸಿದ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಮಾಡಲಿಲ್ಲ ಜತೆಗೆ ಭಾರತೀಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಕೂಡ ಪ್ರಾಮುಖ್ಯ ನೀಡಿದರು," ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರಿನಲ್ಲಿಂ ಆರಂಭವಾದ ಐದು ದಿನಗಳ ಕರಕುಶಲ ಹಾಗು ಕೈಮಗ್ಗದ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟದ ಪವಿತ್ರ ವಸ್ತ್ರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಿ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಕಂಡವರು ಗಾಂಧೀಜಿ. ಇಂದಿನ ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ಸ್ವಾವಲಂಬನೆಯ ಬದುಕು ಮುಖ್ಯ. ಅದರಲ್ಲೂ ರೈತರು ಮತ್ತು ನೇಕಾರರು ಸ್ವಾವಲಂಬಿಗಳಾದಾಗ ಅದರಿಂದ ಬೇರೆ ಜನರಿಗೂ ಉದ್ಯೋಗ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪ್ರಸನ್ನರವರ ಪವಿತ್ರ ವಸ್ತ್ರ ಅಭಿಯಾನದ ಕಾರ್ಯ ಪ್ರಶಂಸನಾರ್ಹ. ಈ ಮೂಲಕ ಗಾಂಧಿ ಮಾರ್ಗ ಪ್ರಸ್ತುತಕ್ಕೂ ಅನಿವಾರ್ಯ ಎಂಬುದನ್ನು ತೋರಿಸಿದೆ," ಎಂದರು.
ಕೈಮಗ್ಗ ಉತ್ಪಾದನೆ ಪ್ರೋತ್ಸಾಹಿಸಬೇಕು
ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಕರ್ಮಿ ಹಾಗು ಕೈಮಗ್ಗ ವಸ್ತ್ರಗಳ ಹೋರಾಟಗಾರ ಪ್ರಸನ್ನ, "ಕಲಬೆರಕೆ ಖಾದಿ, ಕೈಮಗ್ಗದ ತಡೆಯಲು ತಂತ್ರಜ್ಞಾನ ಅಭಿವೃದ್ಧಿ ಗೊಳಿಸಿರುವ ಕುರಿತು ಹಾಗೂ ಕರ್ನಾಟಕದ ಕಾರಾಗೃಹಗಳಲ್ಲಿ ಮುಖ್ಯವಾಗಿ ಮಹಿಳೆಯರು ಕೈಮಗ್ಗ ಉತ್ಪಾದನೆ ಮಾಡುತ್ತಿದ್ದು, ಅದನ್ನು ಪ್ರೋತ್ಸಾಹಿಸುವಂತೆ," ಕೋರಿದರು.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಚಿವೆ, "ಸಂಬಂಧಪಟ್ಟ ಸಚಿವಾಲಯದ ಗಮನಕ್ಕೆ ತಂದು, ಆ ನಿಟ್ಟಿನೆಡೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಉಡುಪಿ ಸೀರೆ ನೇಕಾರರ ಪರವಾಗಿ ತಾವು ಪ್ರೋತ್ಸಾಹ ನೀಡಿದ್ದು, ಅದೇ ರೀತಿಯಲ್ಲಿ ಇತರ ನೇಕಾರರ ಪರವಾಗಿ ನಿಲ್ಲತ್ತೇನೆಂದರು."
ಕರಕುಶಲ ಹಾಗು ಕೈಮಗ್ಗದ ಉತ್ಪನ್ನಗಳ ವಸ್ತು ಪ್ರದರ್ಶನ
ಪವಿತ್ರ ವಸ್ತ್ರ ಅಭಿಯಾನದಲ್ಲಿ ಚರಕ, ದೇಸಿ ಸಂಸ್ಥೆಯು ಕೋವಿಡ್ ಸಮಯದಲ್ಲಿ ಹೊರತಂದ ನೈಸರ್ಗಿಕ ಬಣ್ಣದ ಹೊಸ ಶೈಲಿಯ, ಪ್ರಿಂಟ್‌ಗಳ ಪದಾರ್ಥಗಳೊಂದಿಗೆ, ದೇಶದ ಇತರೆ ಭಾಗಗಳಿಂದ ಬಂದಂತಹ ಸುಪ್ರಸಿದ್ಧ ಖಾದಿ ಸಂಸ್ಥೆಗಳಾದ ತಮಿಳುನಾಡಿನ ತುಲಾ ಖಾದಿ, ಮಹಾರಾಷ್ಟ್ರದ ಮಘನ್ ಖಾದಿ ಹಾಗೂ ಸುಮಧ ಖಾದಿ, ಆಂಧ್ರಪ್ರದೇಶದ ಟಿಂಬಕ್ಟು ಖಾದಿ ಹಾಗೂ ಕಲಾ ಸೀಮ ಪದಾರ್ಥಗಳು, ಕೈಮಗ್ಗ ನೇಕಾರರ ಒಕ್ಕೂಟದ ಸಾಂಪ್ರದಾಯಿಕ ಸೀರೆ, ಬಟ್ಟೆ, ಇತರೆ ಉಡುಪುಗಳು, ಫಾರ್ಮ್ ವೇದ, ಇಕ್ರಾ ಸಂಸ್ಥೆಯ ಕೃಷಿ ಉತ್ಪನ್ನಗಳು, ಸಹನಾ, ಚೇತನಾ, ಅಗಸ್ತ್ಯ ಸಂಸ್ಥೆಯ ಕರಕುಶಲ ವಸ್ತುಗಳು ಮತ್ತು ವಿವಿಧ ಕೈ ಉತ್ಪನ್ನಗಳ ಉತ್ಪಾದಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
ತುಲಾ ಖಾದಿ ಸಂಸ್ಥೆಯ ಸಂಸ್ಥಾಪಕರಾದ ಅನಂತು, ಚರಕ ಸಂಸ್ಥೆಯ ವಿನ್ಯಾಸಕಿ ಹಾಗೂ ವ್ಯವಸ್ಥಾಪಕಿ ಪದ್ಮಶ್ರೀ, ದೇಸಿ ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ ಕೃಷ್ಣ, ಸುಮಧ ಸಂಸ್ಥೆಯ ವೃಶಾಲಿ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ದೇಸಿ ಸಂಸ್ಥೆ, ಗ್ರಾಮ ಸೇವಾ ಸಂಘದ ಕಾರ್ಯಕರ್ತರಾದ ಆಶಾ, ಅಕ್ಷಯ್, ಸ್ಮಿತ, ಅಭಿಲಾಷ್, ದಿಲೀಪ್, ಕಾರ್ತಿಕ್, ಮಂಜು ಶಿಕಾರಿ, ಸಾಕ್ಷಿ, ಐಶ್ವರ್ಯ, ಹುಚ್ಚೇಶ್ ಇತರರು ಹಾಜರಿದ್ದರು.










