ಕಾಸರಗೋಡು: ನವೆಂಬರ್ ತಿಂಗಳಲ್ಲಿ ಶಾಲೆಗಳ ಚಟುವಟಿಕೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಶಾಲೆಗಳ ಕಟ್ಟಡಗಳ ಮತ್ತು ಬಸ್ ಗಳ ಫಿಟ್ ನೆಸ್ ಖಚಿತಪಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕು ಆಯೋಗ ಸದಸ್ಯೆ ಪಿ.ಪಿ.ಶ್ಯಾಮಲಾದೇವಿ ಆದೇಶಿಸಿದರು.
ಶಿಕ್ಷಣ ಹಕ್ಕು ಕಾನೂನು ಸಂಬಂಧ ನಿರ್ವಹಣೆ ಹೊಣೆಗಾರಿಕೆಯ ಸಿಬ್ಬಂದಿಯೊಂದಿಗೆ ನಡೆಸಲಾದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
9 ತಿಂಗಳ ಕಾಲ ಮುಚ್ಚುಗಡೆಯಲ್ಲಿದ್ದ ಶಾಲೆಗಳನ್ನು ತೆರೆಯುವುದು ನೇರನೋಟಕ್ಕೆ ಸರಳ ವಿಚಾರವಾಗಿ ಕಂಡರೂ, ಸೂಕ್ಷ್ಮ ಸಮಸ್ಯೆಗಳಿಗೆ ಕಾರಣವಾಗುವ ಭೀತಿಯಿದೆ. ವಿವಿಧ ಇಲಾಖೆಗಳ ಏಕೀಕರಣದ ಜೊತೆಗೆ ಚಟುವಟಿಕೆ ನಡೆಸಿ ಇದಕ್ಕೆ ಮುಂಜಾಗರೂಕತೆ ಸಹಿತ ಚಟುವಟಿಕೆಗಳನ್ನು ನಡೆಸಬೇಕು ಎಂದವರು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಪ್ರಕಟಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಲು ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದ ಸಭೆ ತೀರ್ಮಾನಿಸಿದೆ. ಶಾಲೆಗಳ ತರಗತಿ ಕೊಠಡಿಗಳು, ಕ್ಯಾಂಟೀನ್, ಗ್ರಂಥಾಲಯ, ಶೌಚಾಲಯ, ಶಾಲಾ ಬಸ್ ಇತ್ಯಾದಿಗಳನ್ನು ಕಡ್ಡಾಯವಾಗಿ ಸಾನಿಟೈಸ್ ನಡೆಸಲಾಗುವುದು. ಸಾಮಾಜಿಕ ಅಂತರ ಪಾಲಿಸಿ ಒಂದು ಬೆಂಚಿನಲ್ಲಿ ಇಬ್ಬರು ಮಕ್ಕಳು ಎಂಬ ರೀತಿ ಕುಳಿತುಕೊಳ್ಳುವ ವ್ಯವಸ್ಥೆ ಏರ್ಪಡಿಸಲಾಗುವುದು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿಯ ತಪಸಣೆ ಕಡ್ಡಾಯಗೊಳಿಸಲಾಗುವುದು. ಗರಿಷ್ಠ ಮಟ್ಟದಲ್ಲಿ ಬಾಹ್ಯ ವ್ಯಕ್ತಿಗಳ ಪ್ರವೇಶಾತಿ ನಿಯಂತ್ರಿಸಲಾಗುವುದು. ಶಿಕ್ಷಕ-ರಕ್ಷಕ ಸಂಘಗಳ ಸಭೆಯನ್ನು ಶಾಲಾರಂಭದ ನಂತರವೂ ಆನ್ ಲೈನ್ ರೂಪದಲ್ಲೇ ನಡೆಸಲಾಗುವುದು 2 ವಾರಗಳಿಗೊಮ್ಮೆ ಮಕ್ಕಳ ಶಿಕ್ಷಣ ಗುಣಮಟ್ಟ ಕುರಿತು ಶಿಕ್ಷಕರು ಅವಲೋಕನ ನಡೆಸುವರು ಇತ್ಯಾದಿ ತೀರ್ಮಾನಗಳನ್ನು ಸಭೆ ಕೈಗೊಂಡಿದೆ.
ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್, ಎ.ಎಸ್.ಪಿ. ಹರಿಶ್ಚಂದ್ರ ನಾಯ್ಕ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು ಸ್ವಾಗತಿಸಿದರು. ಸಹಾಯಕ ಶಿಕ್ಷಣ ಅಧಿಕಾರಿ ಆಗಸ್ಟಿನ್ ಬರ್ನಾರ್ಡ್ ವಂದಿಸಿದರು.




