HEALTH TIPS

ಚಳಿಗಾಲದ ಅಧಿವೇಶನ: 26 ಮಸೂದೆ ಮಂಡನೆ ಸಾಧ್ಯತೆ, ಎಂಎಸ್‌ಪಿ-ಪೆಗಾಸಸ್‌ ಮೇಲೆ ವಿಪಕ್ಷಗಳ ಕಣ್ಣು

 ನವದೆಹಲಿಇಂದಿನಿಂದ ಅಂದರೆ ನವೆಂಬರ್‌ 29 ರಿಂದ ಚಳಿಗಾಲದ ಅಧಿವೇಶನವು ಆರಂಭ ಆಗಲಿದ್ದು ಡಿಸೆಂಬರ್‌ ‌23 ರವರೆಗೆ ಈ ಅಧಿವೇಶನವು ನಡೆಯಲಿದೆ. ಕೋವಿಡ್‌ ಮಾರ್ಗಸೂಚಿಯ ಕಟ್ಟುನಿಟ್ಟಾದ ಪಾಲನೆಯ ಜೊತೆಗೆ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ. ಈ ಅಧಿವೇಶನದಲ್ಲಿ ಪ್ರಮುಖವಾಗಿ ಕೃಷಿ ಕಾಯ್ದೆ ರದ್ಧತಿ ಮಸೂದೆಗೂ ಮಂಡನೆ ಆಗಲಿದೆ. ಈ ಅಧಿವೇಶನಕ್ಕೂ ಪೂರ್ವಭಾವಿಯಾಗಿ ಸರ್ವ ಪಕ್ಷಗಳ ಸಭೆಯೂ ನಡೆದಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆಗೆ ಹಾಜರು ಆಗದ ಹಿನ್ನೆಲೆ ವಿರೋಧ ಪಕ್ಷಗಳು ಟೀಕೆ ಮಾಡಿದೆ. ಈ ನಡುವೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಹಲವಾರು ವಿಚಾರಗಳನ್ನು ಎತ್ತಲು ಮುಂದಾಗಿದೆ.

ಚಳಿಗಾಲದ ಅಧಿವೇಶನದ ಮೊದಲ ದಿನವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ರೈತರಿಗಾಗಿ ಇರುವ ವಿದ್ಯುತ್ ಮಸೂದೆಯು ಹೆಚ್ಚು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಹಾಗೆಯೇ ಕೊರೊನಾ ವೈರಸ್‌ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರವನ್ನು ನೀಡುವ ವಿಚಾರವನ್ನು ಕೂಡಾ ವಿರೋಧ ಪಕ್ಷಗಳು ಎತ್ತಲಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್‌ "ರೈತರ ಬೇಡಿಕೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವಿಚಾರವನ್ನು ನಾವು ಅಧಿವೇಶನದಲ್ಲಿ ಎತ್ತಲಿದ್ದೇವೆ. ಹಾಗೆಯೇ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರ ಸಾವಿನ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾರ ಪುತ್ರನು ಆರೋಪಿಯಾದ ಕಾರಣ ಅಜಯ್‌ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ನಾವು ಅಧಿವೇಶನದಲ್ಲಿ ಮಾಡಲಿದ್ದೇವೆ. ಅದಲ್ಲದೇ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ಮಾತನಾಡಲಿದ್ದೇವೆ. ಹಣದುಬ್ಬರ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ, ಚೀನಾದ ಆಕ್ರಮಣ, ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ನಾವು ಎತ್ತಲಿದ್ದೇವೆ," ಎಂದು ತಿಳಿಸಿದೆ.

 ಮೊದಲ ದಿನದಂದು ಸರ್ಕಾರ ವಿರುದ್ಧ ಮುಗಿಬೀಳಲು ವಿರೋಧ ಪಕ್ಷಗಳು ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಪೆಗಾಸಸ್‌, ಚೀನಾದ ಆಕ್ರಮಣ ಹಾಗೂ ಇಂಧನ ಬೆಲೆ ಏರಿಕೆ ವಿಚಾರವನ್ನು ವಿರೋಧ ಪಕ್ಷಗಳು ಮುನ್ನೆಲೆಗೆ ತರಲಿದೆ. ಮೊದಲ ದಿನದಂದೇ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯು ಮಂಡನೆ ಆಗಲಿದೆ. ಈ ಹಿನ್ನೆಲೆಯಿಂದಾಗಿ ಬಿಜೆಪಿ ಆಡಳಿತದ ಪ್ರಮುಖ ವಿಪಕ್ಷ ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್‌ ಅನ್ನು ಜಾರಿ ಮಾಡಿದೆ. ಪಕ್ಷದ ಸಂಸದರು ಕಾಂಗ್ರೆಸ್‌ ಪಕ್ಷದ ಎಲ್ಲಾ ನಿಲುವುಗಳಿಗೆ ಬದ್ಧವಾಗಿರಬೇಕು. ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯನ್ನು ಮಂಡನೆ ಮಾಡುವ ವೇಳೆ ಎಲ್ಲ ಕಾಂಗ್ರೆಸ್‌ ಸಂಸದರು ಇರಬೇಕು ಎಂದು ವಿಪ್‌ನಲ್ಲಿ ತಿಳಿಸಲಾಗಿದೆ. ಬಿಜೆಪಿಯು ಕೂಡಾ ತನ್ನ ಎಲ್ಲಾ ಸಂಸದರು ಹಾಜರು ಆಗಬೇಕು ಎಂದು ವಿಪ್‌ ಅನ್ನು ಜಾರಿ ಮಾಡಿದೆ. ಈ ಅಧಿವೇಶನದಲ್ಲಿ ಪ್ರಮುಖವಾಗಿ ಕ್ರಿಪ್ಟೋಕರೆನ್ಸಿ ನಿಯಂತ್ರಣ, ಡೇಟಾ ರಕ್ಷಣೆ, ಇಡಿ ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಮಸೂದೆಗಳು ಮಂಡನೆ ಆಗಲಿದೆ. ಹಾಗಾದರೆ ಒಟ್ಟಾಗಿ ಎಷ್ಟು ಮಸೂದೆಗಳು ಮಂಡನೆ ಆಗಲಿದೆ, ಯಾವೆಲ್ಲಾ ಮಸೂದೆಗಳು ಸಂಸತ್ತಿನಲ್ಲಿ ಸದ್ದು ಮಾಡಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಬಿಜೆಪಿ ನಾಯಕ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯು ವಿವಿಧ ಪಾಲುದಾರರೊಂದಿಗೆ ಕ್ರಿಪ್ಟೋಕರೆನ್ಸಿಯ ಬಗ್ಗೆ ಚರ್ಚೆ ನಡೆಸಿದ ಒಂದು ವಾರದ ಬಳಿಕ ಈ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆಯು ಸಿದ್ಧ ಮಾಡಲಾಗಿದೆ. ಈ ಚರ್ಚೆಯ ಬಳಿಕ ಡಿಜಿಟಲ್ ಕರೆನ್ಸಿಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ಖಂಡಿತವಾಗಿ ಇದನ್ನು ನಿಯಂತ್ರಣ ಮಾಡಬೇಕು ಎಂಬ ಒಪ್ಪಂದಕ್ಕೆ ಬರಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಅನುಮತಿಸುವಾಗ ಕೆಲವು ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಹೊರತುಪಡಿಸಿ ಎಲ್ಲವನ್ನು ನಿಷೇಧಿಸುವ ಅವಕಾಶವನ್ನು ಮಸೂದೆಯು ನೀಡುತ್ತದೆ.

  ಪ್ರಮುಖ ಮಸೂದೆ: ಕೃಷಿ ಕಾಯ್ದೆ ರದ್ದು ಮಸೂದೆ ಕಳೆದ ಒಂದು ವರ್ಷದಿಂದ ರೈತರು ದೇಶದಲ್ಲಿ ಪ್ರತಿಭಟನೆಯನ್ನು ನಡೆಸಲು ಕಾರಣವಾಗಿರುವ ಮೂರು ಕೃಷಿ ಕಾಯ್ದೆ ಮಸೂದೆಗಳನ್ನು ರದ್ದು ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಾಗುತ್ತದೆ. ಈ ಮಸೂದೆಯು ಪ್ರಮುಖವಾದ ಮುಸೂದೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್‌ 19 ರಂದು ಈ ಕೃಷಿ ಕಾಯ್ದೆಯನ್ನು ರದ್ದು ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಈ ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿ ಅಂಗೀಕಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಪ್ರಸ್ತುತ ರೈತರು ಕನಿಷ್ಠ ಬೆಂಬಲ ಬೆಲೆ ವಿಚಾರವನ್ನು ಮುಂದಿರಿಸಿದೆ. ಇನ್ನು ಈ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹ ಮಾಡಿದೆ.

ಶಾಸನಗಳನ್ನು ಬದಲಾಯಿಸಲು ಅವಕಾಶ ನೀಡುವ ಮಸೂದೆ ಇನ್ನು ಹಲವಾರು ಶಾಸನಗಳನ್ನು ಬದಲಾವಣೆ ಮಾಡಲು ಅವಕಾಶ ನೀಡುವ ಮಸೂದೆಗಳು ಕೂಡಾ ಇದೆ. ನಾರ್ಕೋಟಿಕ್ಸ್ ಡ್ರಗ್ ಮತ್ತು ಸೈಕೋಟಿಕ್ ಕಾಯ್ದೆಗೆ ತಿದ್ದುಪಡಿ ಮಸೂದೆ, ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆಗಳು ಇದಾಗಿದೆ. ಕೇಂದ್ರ ಜಾಗೃತ ಆಯೋಗ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ತಿದ್ದುಪಡಿ ಮಸೂದೆಗಳು ಕೇಂದ್ರ ವಿಜಿಲೆನ್ಸ್ ಕಮಿಷನ್ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ (ಸಿಬಿಐ) ನ ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತಾರ ಮಾಡುವ ಪ್ರಸ್ತಾಪವನ್ನು ಮಾಡುತ್ತದೆ.

ಸಂವಿಧಾನ (ಎಸ್‌ಸಿ ಮತ್ತು ಎಸ್‌ಟಿ) (ತಿದ್ದುಪಡಿ) ಮಸೂದೆ ಸಂವಿಧಾನದ ಆದೇಶ ತಿದ್ದುಪಡಿ ಮಸೂದೆಯು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶಕ್ಕೆ ರಾಜಕೀಯವಾಗಿ ಮಹತ್ವದ ಮಸೂದೆ ಆಗಿದೆ. ಚಳಿಗಾಲದ ಅಧಿವೇಶನದಲ್ಲಿ ಉತ್ತರ ಪ್ರದೇಶದ ಎಸ್‌ಸಿ ಹಾಗೂ ಎಸ್‌ಟಿ ಪಟ್ಟಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡುವ ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆಯನ್ನು ಸಹ ಪರಿಚಯಿಸಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ತ್ರಿಪುರಾದ ಎಸ್‌ಸಿ ಮತ್ತು ಎಸ್‌ಟಿ ಪಟ್ಟಿಯನ್ನು ತಿದ್ದುಪಡಿ ಮಾಡಲು ಮತ್ತೊಂದು ಮಸೂದೆ ಮಂಡನೆ ಆಗಲಿದೆ. ಇದು 2023 ರಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಿಂದಾಗಿ ಮಹತ್ವವನ್ನು ಪಡೆದಿದೆ.

ದತ್ತಾಂಶ ಸಂರಕ್ಷಣಾ ಮಸೂದೆ ದತ್ತಾಂಶ ಸಂರಕ್ಷಣಾ ಮಸೂದೆ 2019 ಕುರಿತು ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ. ಈ ಬಹುನಿರೀಕ್ಷಿತ ವರದಿಯು ಹಲವಾರು ಸುತ್ತಿನ ಸಭೆಗಳನ್ನು ಹಾಗೂ ಹಲವಾರು ಬಾರಿ ಚರ್ಚೆಯನ್ನು ನಡೆಸಿ ಸಿದ್ಧ ಪಡಿಸಲಾಗಿದೆ. ಈ ಸಮಿತಿಯು 200 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಆ ಪೈಕಿ 170 ತಿದ್ದುಪಡಿಯನ್ನು ಲೋಕಸಭೆ ಸಂಸದರು, ಸಮಿತಿಯ ಅಧ್ಯಕ್ಷ ಪಿಪಿ ಚೌಧರಿ ಪ್ರಸ್ತಾಪ ಮಾಡಿದ್ದಾರೆ. ಈ ಮಸೂದೆಯನ್ನು ಈ ಹಿಂದೆ ವೈಯಕ್ತಿಕ ಡೇಟಾ ರಕ್ಷಣೆ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಡೇಟಾ ಸಂರಕ್ಷಣಾ ಮಸೂದೆ ಅಂದರೆ ದತ್ತಾಂಶ ಸಂರಕ್ಷಣಾ ಮಸೂದೆ ಎಂದು ಕರೆಯಲಾಗುತ್ತದೆ. ಈ ಮಸೂದೆಯು ವೈಯಕ್ತಿಕ ಹಾಗೂ ವ್ಯಕ್ತಿಗತವಲ್ಲದ ವಿಚಾರಗಳನ್ನು ಕೂಡಾ ಪ್ರಸ್ತಾಪ ಮಾಡುವ ಹಿನ್ನೆಲೆಯಿಂದಾಗಿ ಈ ಮಸೂದೆಯಲ್ಲಿನ ವೈಯಕ್ತಿಕ ಎಂಬ ಶಬ್ದವನ್ನು ತೆಗೆದು ಹಾಕಲಾಗಿದೆ. ಈ ಮಸೂದೆಯು ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿಷಯಗಳನ್ನೂ ಒಳಗೊಂಡಿರುತ್ತದೆ. ಈ ಮಸೂದೆಯು ವ್ಯಕ್ತಿಗಳ ವೈಯಕ್ತಿಕ ಡೇಟಾದ ರಕ್ಷಣೆಯನ್ನು ಒದಗಿಸಲು ಮತ್ತು ಅದಕ್ಕಾಗಿ ಡೇಟಾ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಆದರೆ ಈ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದೆ. ಅಧಿವೇಶನದಲ್ಲಿ ಮಂಡನೆ ಆಗಲಿರುವ ಇತರೆ ಮಸೂದೆಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆಯು ಕೂಡಾ ಮಂಡನೆ ಆಗಲಿದೆ. ಈ ಮಸೂದೆಯು ಉನ್ನತ ನ್ಯಾಯಾಂಗದ ನ್ಯಾಯಾಧೀಶರ ವೇತನ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆ ಆಗಿದೆ. ದಿವಾಳಿತನ ಮತ್ತು ಬ್ಯಾಂಕ್‌ ವಂಚನೆ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ, ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಅಂತರ-ಸೇವಾ ಸಂಸ್ಥೆಗಳು (ಆಜ್ಞೆ, ನಿಯಂತ್ರಣ ಮತ್ತು ಶಿಸ್ತು) ಮಸೂದೆ 2021 ಕೂಡಾ ಮಂಡನೆ ಆಗಲಿದೆ. ಎಮಿಗ್ರೇಷನ್ ಮಸೂದೆ 2021 ಮಂಡನೆ ಆಗಲಿದೆ. ಎಮಿಗ್ರೇಷನ್ ಆಕ್ಟ್ 1983 ರ ಬದಲಾಗಿ ಎಮಿಗ್ರೇಷನ್ ಮಸೂದೆ 2021 ಮಂಡನೆ ಆಗಲಿದೆ. ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ 2021, ವ್ಯಕ್ತಿಗಳ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2021 ಕೂಡಾ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಆಗಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries