ಮಂಜೇಶ್ವರ: ಕೊರೊನಾ ಪ್ರಬೇಧ ಓಮಿಕ್ರಾಮ್ ಅಲೆ ನಿಯಂತ್ರಣಕ್ಕೆ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಸೂಚಿಸುತ್ತಿದ್ದಂತೆ ಕಾಸರಗೋಡಿನ ಗಡಿನಾಡ ಜನತೆಗೆ ಮತ್ತೆ ಆತಂಕ ಆರಂಭಗೊಂಡಿದೆ.
ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್‍ಫರೆನ್ಸ್ ನಡೆಸುವ ಮೂಲಕ ಕೇರಳದಿಂದ ಕರ್ನಾಟಕ ಆಗಮಿಸುವವರಿಗೆ 72ತಾಸುಗಳೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದಿರುವುದನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಆದೇಶಿಸಿರುವುದರಿಂದ ಗಡಿಪ್ರದೇಶದ ಜನತೆ ತಲ್ಲಣಗೊಂಡಿದ್ದಾರೆ.
ಈಗಾಗಲೇ ಕೋವಿಡ್ ಪ್ರಮಾಣದಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಗಡಿಪ್ರದೇಶದಲ್ಲಿ ಯಾವುದೇ ತಪಾಸಣೆಯಿಲ್ಲದೆ ಕರ್ನಾಟಕ ಪ್ರವೇಶಿಸಲಾರಂಭಿಸಿದ ಕೆಲವೇ ದಿವಸಗಳಲ್ಲಿ ಮತ್ತೆ ನಿಯಂತ್ರಣದ ಭೀತಿ ಎದುರಾಗಿದೆ. ಕೇರಳದಲ್ಲಿ ಶಿಕ್ಷಣ ಸಂಸ್ಥೆಗಳೂ ತೆರೆದು ಕಾರ್ಯಾಚರಿಸಲಾರಂಬಿಸಿದ್ದು, ಸಂಭಾವ್ಯ ಮೂರನೇ ಅಲೆಗೆ ಮತ್ತೆ ದೇಶ ಸ್ತಬ್ಧಗೊಳ್ಳುವ ಭೀತಿ ಎದುರಾಗಿದೆ.
ಗಡಿ ಜನತೆಗೆ ತಪ್ಪದ ಆತಂಕ:
ಗಡಿ ಪ್ರದೇಶದ ಜನತೆ ಹೆಚ್ಚಾಗಿ ಕರ್ನಾಟಕವನ್ನೇ ಆಶ್ರಯಿಸುತ್ತಿದ್ದು, ನಿಯಂತ್ರಣ ಏರ್ಪಟ್ಟಾಗಲೆಲ್ಲಾ ಗಡಿ ಪ್ರದೇಶದ ಜನತೆ ಸಮಸ್ಯೆಗೆ ಸಿಲುಕುತ್ತಾರೆ. ತಲಪ್ಪಾಡಿ, ಜಾಲ್ಸೂರ್, ಪಾಣತ್ತೂರ್, ವರ್ಕಾಡಿ-ಬಾಕ್ರಬೈಲ್, ಅಡ್ಕಸ್ಥಳದ ಸಾರಡ್ಕ, ಗಾಳಿಮುಖ, ಈಶ್ವರಮಂಗಿಲ ಸೇರಿದಂತೆ ಗಡಿ ಪ್ರದೇಶದ ಜನತೆಗೆ ನಿಯಂತ್ರಣ ಬಿಸಿ ತಟ್ಟುತ್ತಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಸೇವೆ ಲಭ್ಯವಾಗಬೇಕಾದಲ್ಲಿ ನೆರೆಯ ದ.ಕ ಜಿಲ್ಲೆಯನ್ನು ಆಶ್ರಯಿಸಿರುವ ಕಾಸರಗೋಡಿನ ಜನತೆಗೆ ನಿಯಂತ್ರಣ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಇತ್ತೀಚೆಗಷ್ಟೆ ಕರೊನಾ ಇಳಿಕೆಯಾದ ಹಿನ್ನೆಲೆಯಲ್ಲಿ ಗಡಿ ಭಾಗದ ಚೆಕ್‍ಪೋಸ್ಟ್‍ಗಳು ತೆರೆದುಕೊಂಡು, ಕೇರಳದ ಕೆಎಸ್ಸಾರ್ಟಿಸಿ ಬಸ್‍ಗಳು ಹಾಗೂ ಟೂರಿಸ್ಟ್ ವಾಹನಗಳು ಅಂತಾರಾಜ್ಯ ಸಂಚಾರ ಆರಂಭಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಿರುವ ಕೇರಳ-ಕರ್ನಾಟಕ ಅಂತಾರಾಜ್ಯ ಸಂಚಾರದ ಕೆಲವೊಂದು ಖಾಸಗಿ ಬಸ್‍ಗಳು ಇನ್ನೂ ಕರ್ನಾಟಕ ಸಂಚಾರ ಆರಂಭಿಸಿಲ್ಲ.
ಇಳಿಕೆಯಾಗುತ್ತಿರುವ ಪ್ರಮಾಣ:
ಕಾಸರಗೋಡು ಜಿಲ್ಲೆಯಲ್ಲಿ ಕರೊನಾ ಬಾಧಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರಲಾರಂಭಿಸಿದೆ. ಶನಿವಾರ ಪ್ರತಿದಿನದ ಕೋವಿಡ್ ಬಾಧಿತರ ಸಂಖ್ಯೆ 95 ಆಗಿದ್ದರೆ, ಈ ಸಂಖ್ಯೆ ಕೇರಳದಲ್ಲಿ 4741 ಆಗಿತ್ತು. ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಈ ಸಂಖ್ಯೆ 500ರ ಗಡಿ ದಾಟಿದ್ದರೆ, ಕೇರಳದಲ್ಲಿ ಇದು 10ಸಾವಿರವನ್ನೂ ಮೀರಿತ್ತು. ರಾಜ್ಯದಲ್ಲಿ ಕೋವಿಡ್‍ನಿಂದ ಮುಕ್ತಿ ಹೊಂದುತ್ತಿರುವವರ ಪ್ರತಿದಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬರಲಾರಂಭಿಸಿದೆ.
ಅಭಿಮತ:
ಜಿಲ್ಲೆಯಲ್ಲಿ ಆರ್‍ಟಿಪಿಸಿಆರ್ ತಪಾಸಣೆ ಕಡ್ಡಾಯಗೊಳಿಸುವ ಬಗ್ಗೆ ಡಿಎಂಓ ಜತೆ ಸಮಾಲೋಚಿಸಲಾಗುವುದು. ವಿದೇಶದಿಂದ ಆಗಮಿಸುವವರ ಬಗ್ಗೆ ತೀವ್ರ ನಿಗಾವಹಿಸಲಾಗುವುದು. ವಿಮಾ ನ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಿದ ನಂತರವೇ ಪ್ರವಾಸಿಗರು ಅಲ್ಲಿಂದ ಹೊರಬರುತ್ತಿದ್ದರೂ, ಜಿಲ್ಲಾಡಳಿತ ವತಿಯಿಂದ ಕಟ್ಟುನಿಟ್ಟಿನ ನಿಯಂತ್ರಣ ಮುಂದುವರಿಯಲಿದೆ.
-ಭಂಡಾರಿ ಸ್ವಾಗತ್ ರಣವೀರ್‍ಚಂದ್,
ಜಿಲ್ಲಾಧಿಕಾರಿ, ಕಾಸರಗೋಡು




