ಕೋಝಿಕ್ಕೋಡ್: ತನ್ನ ಮೇಲಧಿಕಾರಿಗಳ ಮೇಲಿನ ದ್ವೇಷ ಸಾಧನೆಗೆ ರೈಲ್ವೆ ಸಿಗ್ನಲ್ ವ್ಯವಸ್ಥೆಯನ್ನು ಏರುಪೇರುಗೊಳಿಸಿದ ಇಬ್ಬರು ಉದ್ಯೋಗಿಗಳನ್ನು ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ಕೋಯಿಕ್ಕೋಡ್ ಫರೋಕ್ ರೈಲ್ವೆ ನಿಲ್ದಾಣದ ಸಿಬ್ಬಂದಿ ಕಕ್ಕೋಡಿ ನಿವಾಸಿ ಪ್ರವೀಣ್‍ರಾಜ್ ಹಾಗೂ ಸುಲ್ತಾನ್‍ಬತ್ತೇರಿಯ ಕೋಟ್ಟೂರ್ ನಿವಾಸಿ ಜಿನೇಶ್ ಅಮಾನತುಗೊಂಡವರು. ರೈಲ್ವೆ ಇಲಾಖೆ ತಾಂತ್ರಿಕ ವಿಭಾಗದಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು.
2021 ಮಾ. 24ರಂದು ಘಟನೆ ನಡೆದಿದ್ದು, ಘಟನೆ ನಂತರ ಇವರನ್ನು ಮಂಗಳೂರು ಹಾಗೂ ಪಾಲಕ್ಕಾಡಿಗೆ ವರ್ಗಾಯಿಸಲಾಗಿತ್ತು. ಮದ್ಯಸೇವಿಸಿದ ಪರಿಣಾಮ ತಪ್ಪು ನಡೆದಿರುವುದಾಗಿ ಸಿಬ್ಬಂದಿ ಸಮಜಾಯಿಷಿ ನೀಡಿದ್ದರೂ, ಇದನ್ನು ರೈಲ್ವೆ ಇಲಾಖೆ ತಳ್ಳಿಹಾಕಿತ್ತು. ಫರೋಕ್ ಹಾಗೂ ವೆಳ್ಳಯಿಲ್ ಹಾದಿ ಮಧ್ಯೆ ರೈಲ್ವೆ ಸೇತುವೆಯ ಐದು ಕಡೆ ಸಿಗ್ನಲ್ ಬಾಕ್ಸ್‍ನಲ್ಲಿ ಹಸಿರು ಲೈಟಿನ ಬದಲು ಹಳದಿ ಲೈಟು ಉರಿಯುವಂತೆ ವಯರುಗಳನ್ನು ಬದಲಾಯಿಸಿದ್ದರು. ಹಸಿರು ಸಿಗ್ನಲ್ ನೀಡಿದರೂ, ಇದು ಹಳದಿಯಾಗಿಯೇ ಉರಿಯುತ್ತಿತ್ತು. ಇದರಿಂದ ಸಿಗ್ನಲ್ ಏರುಪೇರುಗೊಂಡು ಫರೋಕ್-ವೆಳ್ಳಯಿಲ್ ಹಾದಿ ಮಧ್ಯೆ ಸರಕುಸಾಗಾಟ ಸೇರಿದಂತೆ 13ರೈಲುಗಳ ಸಂಚಾರದಲ್ಲಿ ವಿಳಂಬವುಂಟಾಗಿತ್ತು.ತಾಸುಗಳ ಕಾಲ ನಡೆಸಿದ ತಪಾಸಣೆಯಿಂದ ಸಿಗ್ನಲ್ ವ್ಯವಸ್ಥೆ ಪೂರ್ವಸ್ಥಿತಿಗೆ ತರಲಾಗಿತ್ತು. ಹೆಚ್ಚಿನ ಪರಿಣತಿ ಹೊಂದಿದವರಿಗೆ ಮಾತ್ರ ಈ ರೀತಿಯ ಕೃತ್ಯ ನಡೆಸಲು ಸಾಧ್ಯ ಎಂಬುದಾಗಿ ರೈಲ್ವೆ ಇಂಜಿನಿಯರಿಂಗ್ ವಿಭಾಗ ತಿಳಿಸಿದೆ. ವಿವಿಧ ಸಾಕ್ಷಿಗಳು ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ಆರೋಪಿಗಳನ್ನು ಪತ್ತೆಹಚ್ಚಲಾಗಿತ್ತು. ಕೋಯಿಕ್ಕೋಡ್ ಸೀನಿಯರ್ ಸೆಕ್ಷನ್ ಇಂಜಿನಿಯರ್ ಅವರೊಂದಿಗಿನ ವೈಕ್ತಿದ್ವೇಷ ಸಾಧಿಸಲು ಕೃತ್ಯವೆಸಗಿರುವುದಾಗಿ ಆರೋಪಿಗಳಿಬ್ಬರೂ ತಪ್ಪೊಪ್ಪಿಕೊಂಡಿದ್ದರು.




