ಕಾಸರಗೋಡು:ನವೆಂಬರ್ ತಿಂಗಳ ಅಕಾಲಿಕ ಮಳೆ ಕರಾವಳಿ ಭಾಗದ ಕೃಷಿಕರ ನೆಮ್ಮದಿ ಕೆಡಿಸಿದೆ. ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಂಪರ್ ಬೆಲೆಯಿದ್ದರೂ, ಭಾರೀ ಮಳೆ ಸುರಿಯುತ್ತಿರುವುದು ಅಡಿಕೆ ಬೆಳೆಗಾರರಿಗೆ ನಿರಾಸೆ ಮೂಡಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕೃಷಿಕರು ತಮ್ಮ ಜೀವನಕ್ಕಾಗಿ ನಂಬಿರುವುದು ಅಡಿಕೆ ಬೆಳೆಯನ್ನು. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಅಡಿಕೆಯ ಮೊದಲ ಕೊಯ್ಲು ಮುಗಿಸಿದ ಕೃಷಿಕರು, ಅಡಿಕೆಯನ್ನು ಒಣಹಾಕಲು ಅಂಗಳದಲ್ಲಿ ಅಡಿಕೆ ಹರಡಿಕೊಂಡಿರುತ್ತಾರೆ. ಆದರೆ ನಿರಂತರವಾಗಿ ಸುರಿದ ಭಾರೀ ಮಳೆಯು ಅಡಿಕೆ ಅಂಗಳದಲ್ಲೇ ಕೊಳೆಯುವಂತೆ ಮಾಡಿದೆ.
ಅಡಿಕೆ ಒಣಗಲು ಸಾಮಾನ್ಯವಾಗಿ 40 ದಿನಗಳು ಬೇಕು. ಆದರೆ ಈ ಬಾರಿ ವರುಣ ಅಡಿಕೆ ಬೆಳೆಗಾರರಿಗೆ ಕೃಪೆ ತೋರಿಲ್ಲ. ಹಾಗಾಗಿ ಕೃಷಿಕರ ಫಸಲು ಮಳೆಯಲ್ಲಿ ತೋಯ್ದು ಹೋಗಿದೆ. ಕೊಯ್ಲು ಆದ ಅಡಿಕೆ ಅಂಗಳದಲ್ಲೇ ಮಳೆಗೆ ಕೊಳೆತು ಹೋಗಿದೆ. ಅಡಿಕೆಗಳೆಲ್ಲಾ ಮಳೆಯಲ್ಲಿ ಕೊಳೆತು ಕಪ್ಪಾಗಿದ್ದು, ಕೃಷಿಕನಿಗೆ ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿದೆ.
ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದ ಹಿನ್ನಲೆಯಲ್ಲಿ ಪ್ರಮುಖವಾಗಿ ಅಡಿಕೆ ಮತ್ತು ಭತ್ತದ ಬೆಳೆಗಾರರಿಗೆ ನಷ್ಟವುಂಟಾಗಿದೆ. ಕಟಾವಿಗೆ ಬಂದ ಭತ್ತ ಭಾರೀ ಗಾಳಿ ಮಳೆಗೆ ನೆಲಕಚ್ಚಿದರೆ, ಇತ್ತ ಕಟಾವು ಮಾಡಿಟ್ಟ ಭತ್ತ ಮಳೆಗೆ ನೆನೆದು ಮೊಳಕೆ ಬಂದಿದೆ. ಹೀಗಾಗಿ ಸರ್ಕಾರ ಕರಾವಳಿಯ ಕೃಷಿಕರ ಕಡೆಗೂ ಗಮನ ಹರಿಸಬೇಕೆಂದು ಭತ್ತ ಬೆಳೆಗಾರರು ಮನವಿ ಮಾಡಿದ್ದಾರೆ.
ಮಳೆಯ ನಿರಂತರ ಸಿಂಚನ ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ. ಸುದೀರ್ಘ ಮುಂಗಾರುಮಳೆ ಇಳೆಯನ್ನು ಹಸಿರಾಗಿಸಿದರೆ, ಕೃಷಿಕರ ಒಡಲನ್ನು ಮಾತ್ರ ಬರಿದಾಗಿಸಿದೆ. ಶನಿವಾರ ಸುರಿದ ಭಾರೀ ಮಳೆಗೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅಡಿಕೆ ಕೊಚ್ಚಿ ಹೋಗಿದೆ. ಅಡಿಕೆಗೆ ಮಾರುಕಟ್ಟೆಯಲ್ಲಿ ಧಾರಣೆ ಉತ್ತಮವಾಗಿದ್ದರೂ, ಈ ಬಾರಿಯ ಮಳೆ ಮಾತ್ರ ಕೃಷಿಕರಲ್ಲಿ ನಿರಾಸೆ ಮೂಡಿಸಿದೆ.
ಮಳೆಗೆ ಒಂದು ಕೊಯ್ಲಿನ ಅಡಿಕೆಗಳೆಲ್ಲಾ ಕಪ್ಪಾಗಿದ್ದು, ಮಾರುಕಟ್ಟೆಗಳಲ್ಲಿ ಕಪ್ಪಾದ ಅಡಿಕೆಗೆ ಧಾರಣೆಯೂ ಕಡಿಮೆಯಿದೆ. ಹೀಗಾಗಿ ಭಾರೀ ನಷ್ಟದ ಚಿಂತೆ ಕೃಷಿಕರಲ್ಲಿ ಆವರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಸಲು ಹೆಚ್ಚಾಗುವ ಖುಷಿ ಕೃಷಿಕರಲ್ಲಿತ್ತು. ಆದರೆ ನವೆಂಬರ್‌ನ ನಿರಂತರ ಮಳೆಯಿಂದಾಗಿ ಕೊಳೆ ರೋಗ ಉಂಟಾಗಿ ಇಳುವರಿ ಕಡಿಮೆಯಾಗುವ ಆತಂಕ ಒಂದೆಡೆಯಾಗಿದರೆ, ಇನ್ನೊಂದೆಡೆ ಮುಂದಿನ ವರ್ಷ ಫಸಲು ನೀಡುವ ಹಿಂಗಾರು ಮಳೆಗೆ ಕೊಳೆಯುತ್ತಿದೆ.
ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರು ಸೋಲಾರ್ ಟರ್ಪಾಲಿನ ಮೊರೆ ಹೋಗಿದ್ದಾರೆ. ಅಡಿಕೆ ಒಣಗಿಸಲು ಹರಸಾಹಸ ಪಡುತ್ತಿದ್ದು, ಹೆಚ್ಚು ಬಂಡವಾಳವನ್ನು ಉಪಯೋಗಿಸಬೇಕಾಗಿದೆ.
ಸದ್ಯ ತುಂತುರು ಮಳೆಯಾಗುತ್ತಿದ್ದು, ಈ ಪರಿಸ್ಥಿತಿ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಿನ ಪ್ರಕಾರ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತದಂತಹ ತಿರುಗುವಿಕೆ ಆರಂಭವಾಗಿದ್ದು, ನವೆಂಬರ್ 25 ಅಥವಾ 26ರಂದು ತಮಿಳುನಾಡು ಕರಾವಳಿಗೆ ತಲುಪುವ ಮುನ್ಸೂಚನೆ ಇದೆ. ಆದರೆ ಅಷ್ಟೇನು ಪ್ರಬಲವಾಗಿಲ್ಲದಿದ್ದರೂ ರಾಜ್ಯದಲ್ಲಿಯೂ ಮಳೆಯ ಮುನ್ಸೂಚನೆ ಇದೆ.




