ತಿರುವನಂತಪುರ: ಅನಿಯಂತ್ರಿತ ಕಾಡುಹಂದಿ ಬೇಟೆಗೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಕಾಡುಹಂದಿಯನ್ನು ಕ್ಷುದ್ರಜೀವಿಯೆಂದು ಘೋಷಿಸಲಾಗದು. ಸಾರ್ವಜನಿಕರಿಗೆ ಕಾಡುಹಂದಿ ಬೇಟೆಗೆ ಅನುಮತಿ ನೀಡಿದಲ್ಲಿ ಮುಂದದು ಭಾರೀ ತೊಂದರೆಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರವು ಕೇರಳದ ಬೇಡಿಕೆಯನ್ನು ನಿರಾಕರಿಸಿದೆ. ಜೊತೆಗೆ ಕೇರಳ ಬಯಸುವ ತುರ್ತು ಪರಿಹಾರವಾಗಿ ಎಷ್ಟು ಪರಿಹಾರವನ್ನು ಬಯಸುತ್ತದೋ ಅದನ್ನು ಒದಗಿಸುವುದಾಗಿ ಕೇಂದ್ರವು ರಾಜ್ಯಕ್ಕೆ ಭರವಸೆ ನೀಡಿದೆ. ಕೇರಳದಲ್ಲಿ ಕಾಡು ಹಂದಿಗಳ ಹಾವಳಿ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ರಾಜ್ಯ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಮತ್ತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಇಂದು ಈ ನಿಟ್ಟಿನಲ್ಲಿ ಸುಧೀರ್ಘ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಅರಣ್ಯ ಗಡಿ ಗುರುತಿಸುವ ಪ್ರಕ್ರಿಯೆ ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ವೇಳೆ ವೈಜ್ಞಾನಿಕ ರೀತಿಯಲ್ಲಿ ಗಡಿ ನಿರ್ಧರಿಸಲು ಕಂದಾಯ ಇಲಾಖೆ ಸರ್ವೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಡಿಜಿಟಲೀಕರಣ ಜಿಯೋ ರೆಫರೆನ್ಸಿಂಗ್ ಎಂಬ ರಾಷ್ಟ್ರೀಯ ಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದರು.




