ತಿರುವನಂತಪುರಂ: ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸಾವಿನ ಪ್ರಕರಣಗಳಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ 41,124 ಕೋವಿಡ್ ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರ (1,41,149) ಕೇರಳಕ್ಕಿಂತ ಹೆಚ್ಚು ಕೋವಿಡ್ ಮರಣ ಸಂಖ್ಯೆ ಇರುವ ಏಕೈಕ ರಾಜ್ಯವಾಗಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕವನ್ನು (38,220) ಕೇರಳ ಹಿಂದಿಕ್ಕಿದೆ. ನವೆಂಬರ್ 22 ರಿಂದ ಮಹಾರಾಷ್ಟ್ರದಲ್ಲಿ 410 ಮತ್ತು ಕರ್ನಾಟಕದಲ್ಲಿ 45 ಈ ಹಿಂದೆ ಗಣನೆಗೆ ಸೇರಿರದ ಸಾವುಗಳು ಸಂಭವಿಸಿವೆ. ಆದರೆ ಕೇರಳದಲ್ಲಿ 2,949 ಸಾವುಗಳು ಸೇರಿವೆ.
ಡಿಸೆಂಬರ್ 4 ರಂದು ಕೇರಳದಲ್ಲಿ ವರದಿಯಾದ 263 ಸಾವುಗಳಲ್ಲಿ 52 ಸಾವುಗಳು 24 ಗಂಟೆಗಳಲ್ಲಿ ಸಂಭವಿಸಿವೆ. ಉಳಿದ 211 ಸಾವುಗಳನ್ನು ಹಿಂದಿನದಕ್ಕೆ ಸೇರಿಸಲಾಗಿದೆ. ರಾಜ್ಯ ಸರ್ಕಾರವು ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇರಳದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರೊನಾ ಸಾವುಗಳು ಸೇರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಶನಿವಾರ 4,557 ಹೊಸ ಕೋವಿಡ್ ಪ್ರಕರಣಗಳು ಮತ್ತು 5,108 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ನಿಯಂತ್ರಣದಲ್ಲಿದೆ ಎಂದು ಶ್ಲಾಘಿಸಲಾದ 'ಕೇರಳ ಮಾದರಿ' ವಿಫಲವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದೇಶಾದ್ಯಂತ ಪ್ರತಿದಿನ ವರದಿಯಾಗುವ ಪ್ರಕರಣಗಳಲ್ಲಿ ಶೇಕಡ 50 ರಷ್ಟು ಕೇರಳದವರು.




