ನವದೆಹಲಿ: ಕೇರಳದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಮಲಪ್ಪುರಂ, ಕೋಯಿಕ್ಕೋಡ್, ತ್ರಿಶೂರ್ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಮರಣ ಪ್ರಮಾಣ ಹೆಚ್ಚಿದೆ. ಡಿಸೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ 2118 ಸಾವುಗಳು ವರದಿಯಾಗಿವೆ. ಇದು ಹಿಂದಿನ ವಾರಕ್ಕಿಂತ ಹೆಚ್ಚಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಹೇಳಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ತಿಂಗಳ ಅವಧಿಯಲ್ಲಿ ಕೇರಳದಲ್ಲಿ 1,71,521 ಹೊಸ ಕ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ಒಂದು ತಿಂಗಳಿನಲ್ಲಿ ಒಟ್ಟು ಹೊಸ ಪ್ರಕರಣಗಳಲ್ಲಿ 55.08 ಪ್ರತಿಶತವಾಗಿದೆ. ರಾಜ್ಯದ ಎಲ್ಲಾ 13 ಜಿಲ್ಲೆಗಳಲ್ಲಿ ಕಳೆದ ವಾರ ವರದಿಯಾದ ಹೊಸ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೊರೊನಾ ಪ್ರಸರಣ ಮತ್ತು ಸಾವು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ. ಎರ್ನಾಕುಲಂ, ಕೋಝಿಕ್ಕೋಡ್, ತ್ರಿಶೂರ್ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ. ದೇಶದಲ್ಲಿ ಒಮಿಕ್ರಾನ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಗಾ ಮತ್ತು ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದು ಕೇಂದ್ರ ಸೂಚಿಸಿದೆ.

