ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.
0
samarasasudhi
ಡಿಸೆಂಬರ್ 21, 2021
ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.
ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಮಸೂದೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದರು.
ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕೆ ಅವಕಾಶ ನೀಡುವ 'ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಮಸೂದೆ-2021' ಅನ್ನು ಮಂಡಿಸಿ ಮಾತನಾಡಿದ ಸಚಿವೆ ಇರಾನಿ, 'ಯಾವುದೇ ಪದ್ಧತಿ, ಸಂಪ್ರದಾಯಗಳನ್ನು ಒಳಗೊಂಡಂತೆ ಮದುವೆಗೆ ಸಂಬಂಧಿಸಿ ಸದ್ಯ ಜಾರಿಯಲ್ಲಿರುವ ಎಲ್ಲ ಕಾಯ್ದೆಗಳು ಈ ಮಸೂದೆ ಅಂಗೀಕಾರಗೊಂಡ ನಂತರ ರದ್ದಾಗುವವು' ಎಂದು ಹೇಳಿದರು.
ಆದರೆ, ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ನಂತರ, ಸಮಗ್ರ ಪರಿಶೀಲನೆಗಾಗಿ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಿ, ಸದನವನ್ನು ಮುಂದೂಡಲಾಯಿತು.