HEALTH TIPS

"ಕೇರಳದಲ್ಲಿ ಹಿಂದುತ್ವಕ್ಕೆ ಅಂಟಿಕೊಂಡರೆ ಬಿಜೆಪಿಗೆ ಭವಿಷ್ಯವಿಲ್ಲ": ಮೆಟ್ರೋಮ್ಯಾನ್ ಶ್ರೀಧರನ್

               ತಿರುವನಂತಪುರಂ: "ಬಿಜೆಪಿಯು ಹಿಂದುತ್ವಕ್ಕೆ ಅಂಟಿಕೊಳ್ಳುವುದನ್ನು ಬಿಟ್ಟು, ಎಲ್ಲರ ಕಡೆ ಲಕ್ಷ್ಯ ವಹಿಸಬೇಕು. ಹಿಂದುತ್ವದ ರಾಜಕಾರಣವನ್ನು ತೊರೆದು ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾದ ನಿಲುವು ಪ್ರದರ್ಶಿಸಬೇಕಿದೆ," ಎಂದು ಕೇರಳದ ಮೆಟ್ರೋಮ್ಯಾನ್ ಖ್ಯಾತಿಯ ಇ ಶ್ರೀಧರನ್ ಸಲಹೆ ನೀಡಿದ್ದಾರೆ.

                 ಕೇರಳದಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿದಿರುವ ಮೆಟ್ರೋಮ್ಯಾನ್ ಇ ಶ್ರೀಧರನ್, ಭಾರತೀಯ ಜನತಾ ಪಕ್ಷಕ್ಕೆ ಕಿವಿಮಾತು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

               ಕೇರಳದಲ್ಲಿ ಲವ್ ಜಿಹಾದ್ ಎನ್ನುವುದು ಅಷ್ಟೊಂದು ಗಂಭೀರ ವಿಚಾರವೇ ಅಲ್ಲ. ಆದರೆ ರಾಜ್ಯ ಬಿಜೆಪಿ ಘಟಕವು ಅದೇ ವಿಷಯವನ್ನು ಗಂಭೀರ ಸಮಸ್ಯೆ ಎನ್ನುವಂತೆ ಬಿಂಬಿಸಲು ಹೊರಟಿತು. ಚುನಾವಣೆ ಸಂದರ್ಭದಲ್ಲಿ ಲವ್ ಜಿಹಾದ್ ಅಂಶವನ್ನು ಪ್ರಾಥಮಿಕ ಪ್ರಚಾರ ತಂತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಚುನಾವಣಾ ಫಲಿತಾಂಶಕ್ಕೂ ಮೊದಲೇ ಮೆಟ್ರೋ ಮ್ಯಾನ್ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತ್ತು. ಇಂದು ಅದೇ ಶ್ರೀಧರನ್, ಬಿಜೆಪಿ ಮಾಡಿದ ತಪ್ಪುಗಳನ್ನು ತಿದ್ದಿ ಹೇಳುವುದರ ಜೊತೆಗೆ ಕಿವಿಮಾತನ್ನು ಹೇಳಿದ್ದಾರೆ.
              ಹಿಂದುತ್ವಕ್ಕೆ ಅತಿಯಾಗಿ ಅಂಟಿಕೊಳ್ಳುವುದು ಸೂಕ್ತವಲ್ಲ:
         "ಭಾರತೀಯ ಜನತಾ ಪಕ್ಷದಲ್ಲಿ ನಾಯಕರು ತಮ್ಮ ಮನೋಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಿದೆ. ಉದಾಹರಣೆಗೆ, ಬಿಜೆಪಿಯು ಹಿಂದುತ್ವ ಹಾಗೂ ಹಿಂದೂ ಧರ್ಮವನ್ನು ಮುಖ್ಯವಾಗಿ ಬಿಂಬಿಸುತ್ತಾ ಹೋಗುವುದು ಸರಿಯಲ್ಲ. ನಾವು ಕೇರಳದಲ್ಲಿ ಪ್ರತಿಯೊಬ್ಬರ ಪರವಾಗಿದ್ದೇನೆ ಎಂದು ತೋರಿಸಿಕೊಳ್ಳಬೇಕೇ ವಿನಃ ಕೇವಲ ಹಿಂದೂಗಳ ಪರವಾಗಿದ್ದೀವಿ ಎಂದು ತೋರಿಸಿಕೊಳ್ಳುವುದು ಸೂಕ್ತವಲ್ಲ. ಅಲ್ಲದೇ ಬಿಜೆಪಿಗರ ಮನಸ್ಸಿನಲ್ಲಿ ಎಲ್ಲ ವರ್ಗದ ಜನರ ಹಿತಾಸಕ್ತಿಯನ್ನೂ ಹೊಂದಿರಬೇಕು, ಇದು ಪ್ರಾಥಮಿಕ ಹಾಗೂ ಮೂಲಭೂತವಾಗಿ ಬಿಜೆಪಿ ಮಾಡಿಕೊಳ್ಳಬೇಕಾದ ಬದಲಾವಣೆ ಆಗಿದೆ," ಎಂದು ಶ್ರೀಧರನ್ ಬುದ್ಧಿ ಹೇಳಿದ್ದಾರೆ.
              ಬಿಜೆಪಿಗೆ ಬುದ್ಧಿ ಹೇಳಿ, ಮೋದಿಯನ್ನು ಹೊಗಳಿದ ಮೆಟ್ರೋಮ್ಯಾನ್ :
            ಕೇರಳ ಬಿಜೆಪಿಯ ಬಗ್ಗೆ ಟೀಕಿಸಿರುವ ಮೆಟ್ರೋಮ್ಯಾನ್ ಶ್ರೀಧರನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. "ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾಗೆ ಇರಬೇಕು, ನಮ್ಮ ಪ್ರಧಾನಿ ಎಂದಿಗೂ ಹಿಂದೂತ್ವದ ಬಗ್ಗೆ ಮಾತನಾಡುವುದಿಲ್ಲ. ತಾವು ಕೇವಲ ಒಂದು ವರ್ಗದ ಜನರ ಪರವಾಗಿದ್ದೀವಿ ಎನ್ನುವಂತೆ ಎಂದಿಗೂ ಬಿಂಬಿಸಿಕೊಳ್ಳುವುದಿಲ್ಲ. ಅವರು ಭಾರತೀಯರ ಎಲ್ಲರ ಪರವಾಗಿದ್ದಾರೆ, ನಾವೂ ಕೂಡ ಅದೇ ಧೋರಣೆಯನ್ನು ತೆಗೆದುಕೊಳ್ಳಬೇಕಿದೆ," ಎಂದು ಶ್ರೀಧರನ್ ಹೇಳಿದ್ದಾರೆ.
                ಬಿಜೆಪಿ ತೊರೆಯುತ್ತಿಲ್ಲ ಎಂದ ಇ ಶ್ರೀಧರನ್ :
           "ತಮ್ಮ ವಯೋಸಹಜ ಕಾರಣಗಳಿಂದಾಗಿ ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆಯೇ ವಿನಃ, ಭಾರತೀಯ ಜನತಾ ಪಕ್ಷ ತೊರೆಯುತ್ತಿಲ್ಲ ," ಎಂದು ಶ್ರೀಧರನ್ ಸ್ಪಷ್ಟಪಡಿಸಿದ್ದಾರೆ. "ನಾನು ಪಕ್ಷಕ್ಕೆ ಲಭ್ಯವಿರುತ್ತೇನೆ, ಆದರೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಥವಾ ಹರ್ತಾಲ್‌ಗಳಲ್ಲಿ ಭಾಗವಹಿಸುವುದಿಲ್ಲ. ಈ ಅರ್ಥದಲ್ಲಿ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುವುದಿಲ್ಲ. ಆದರೆ ನಾನು ಬಿಜೆಪಿಯಲ್ಲೇ ಇರುತ್ತೇನೆ. ನನ್ನ ಬುದ್ಧಿಶಕ್ತಿ ಮತ್ತು ವಿಷಯಗಳಲ್ಲಿ ನನ್ನ ಅನುಭವಗಳಲ್ಲಿ ನಾನು ಪಕ್ಷದಲ್ಲಿ ಲಭ್ಯವಿರುತ್ತೇನೆ," ಎಂದು ಅವರು ಹೇಳಿದ್ದಾರೆ. "ಕೇರಳದ ಮಟ್ಟಿಗೆ ಬಿಜೆಪಿಯೊಂದೇ ಪರ್ಯಾಯವಾಗಿರುತ್ತದೆ. ''ಈಗಿನ ಎಲ್‌ಡಿಎಫ್ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಯುಡಿಎಫ್, ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್, ವಿಶೇಷವಾಗಿ ಅವರ ಜನಪ್ರಿಯತೆ ಕೂಡ ಕ್ಷೀಣಿಸುತ್ತಿದೆ. ಕೇರಳದಲ್ಲಿ ಬಿಜೆಪಿ ಬಲಗೊಳ್ಳಲು ಮತ್ತು ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮಲು ಇದು ಸದಾವಕಾಶವಾಗಿದೆ. ಅದು ಸಾಧ್ಯವಾಗಲಿದ್ದು, ಕೇರಳದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದೆ," ಎಂದಿದ್ದಾರೆ.
                      ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು?:
        ಕೇರಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರದ ಹೊರತಾಗಿಯೂ ಬಿಜೆಪಿಯು ಒಂದೇ ಒಂದು ಸ್ಥಾನವನ್ನು ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಧರನ್, ಕಾರ್ಯತಂತ್ರ ಮತ್ತು ನಿರ್ವಹಣೆ ಬಗ್ಗೆ ಮಾತನಾಡಿದರು. "ಅನುಕರಣೆ ತಂತ್ರವು ಬಿಜೆಪಿ ಮೇಲೆ ದುಷ್ಪರಿಣಾಮ ಬೀರಿತು. ಕೇರಳ ಬಿಜೆಪಿ ಅಧ್ಯಕ್ಷರನ್ನು ಪದೇ ಪದೇ ಬದಲಾಯಿಸಿದ್ದು ಪ್ರಮುಖ ತಪ್ಪಾಗಿದ್ದು, ಕಳೆದ ಎರಡು-ಮೂರು ವರ್ಷಗಳಲ್ಲಿ ಮೂರರಿಂದ ನಾಲ್ಕು ಬಾರಿ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ಅಧ್ಯಕ್ಷರು ಜನರನ್ನು ತಲುಪುವ ಹೊತ್ತಿಗೆ ಸಮಯ ಮೀರಿ ಹೋಗಿತ್ತು, ಎಂದರು. "ನಾವು ಅತ್ಯಂತ ಒಗ್ಗಟ್ಟಿನ ಪಕ್ಷ ಎಂದು ತೋರಿಸಿಕೊಳ್ಳುವ ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರವು ದೇಶಕ್ಕಾಗಿ ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿದೆ, ಆದರೆ, ಅದನ್ನು ಜನರಿಗೆ ಸರಿಯಾಗಿ ತಿಳಿಸಲು ನಮಗೆ ಸಾಧ್ಯವಾಗಲಿಲ್ಲ. ಕೇಂದ್ರವು ಏನೇ ಮಾಡಿದರೂ, ಇತರೆ ಪಕ್ಷಗಳು ಅದರ ಲಾಭವನ್ನು ಹೈಜಾಕ್ ಮಾಡುತ್ತಿವೆ. ನಮ್ಮಿಂದ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ತಂತ್ರಗಾರಿಕೆ ಬದಲಾಗಬೇಕು. ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಮುಂದಿನ ಚುನಾವಣೆಯವರೆಗೂ ಬಿಜೆಪಿ ಪುನರ್‌ಸಂಘಟನೆ ಮಾಡಿ ಜನರ ವಿಶ್ವಾಸ ಗಳಿಸಬಹುದು. ಇದು ಬಹಳ ಮುಖ್ಯವಾಗಿರುತ್ತದೆ," ಎಂದು ಅವರು ತಿಳಿಸಿದರು.
                   ಜನರನ್ನು ತಲುಪಲು ನಾಯಕತ್ವಕ್ಕೆ ಸಮಯದ ಅಗತ್ಯತೆ :
        ಕೇರಳದಲ್ಲಿ ಪ್ರಸ್ತುತ ಇರುವ ನಾಯಕತ್ವವು ಜನರನ್ನು ತಲುಪುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. "ಸಾಕಷ್ಟು ಸಮಯ" ನೀಡಿದರೆ ಜನರ ಮನಸು ಮುಟ್ಟಲು ಸಾಧ್ಯವಾಗುತ್ತದೆ. ಆದರೆ ನೀವು ಅವರಿಗೆ ಸಮಯ ನೀಡಬೇಕು. ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮುನ್ನ ನಾಯಕರನ್ನು ಕರೆ ತರಬೇಡಿ. ಅದು ಸಾಕಾಗುವುದಿಲ್ಲ. ಅವರು ಕೇಂದ್ರೀಯ ಮಟ್ಟದ ನಾಯಕರೇ ಆಗಿದ್ದರೂ, ಅವರು ಕೇರಳದ ಜನರ ಕೈಗೆ ಸಿಗುವವರಲ್ಲ. ಆದರೆ ಪ್ರಸ್ತುತ ನಾಯಕತ್ವವು ಸಾಕಷ್ಟು ಗಂಭೀರವಾಗಿದ್ದು, ಸಾಕಷ್ಟು ಸಮರ್ಥರಾಗಿದ್ದಾರೆ. ಅವರು ಜನರ ಮನಸ್ಸು ಮತ್ತು ಹೃದಯದಲ್ಲಿ ನಡೆಯಲು ಶಕ್ತರಾಗಬೇಕಿದೆ," ಎಂದು ಅವರು ಹೇಳಿದ್ದಾರೆ.
             ಬಿಜೆಪಿಗೆ ಹಿಂದುತ್ವದ ಸುತ್ತ ರಾಜಕೀಯ ಸೂಕ್ತವಲ್ಲ:
        ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದ ಶ್ರೀಧರನ್, ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಲು ಅನಾರೋಗ್ಯ ಮತ್ತು ವಯಸ್ಸಿನ ಕಾರಣವನ್ನು ನೀಡಿದ್ದಾರೆ. ಆದರೆ, ಬಿಜೆಪಿ ಎಲ್ಲರ ಪಕ್ಷ ಎಂದು ಪುನರುಚ್ಛರಿಸಿದ್ದಾರೆ. "ಬಿಜೆಪಿಯು ಕೇವಲ ಹಿಂದುತ್ವದ ಸುತ್ತ ರಾಜಕೀಯ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ, ಅದು ಖಂಡಿತವಾಗಿಯೂ ಸಾಧ್ಯವಿಲ್ಲ. ಇಂದು ಜನರ ವಿಶ್ವಾಸವನ್ನು ಗಳಿಸಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ. ಈ ಪಕ್ಷವು ಇಡೀ ಭಾರತೀಯರ ಹಿತಾಸಕ್ತಿಯನ್ನು ಮನದಲ್ಲಿಟ್ಟುಕೊಂಡಿದೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿ ಎಷ್ಟು ಬದಲಾವಣೆ, ಸುಧಾರಣೆ ತಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ದೇಶಕ್ಕೆ. ಅದನ್ನು ಕೇರಳದ ಬಿಜೆಪಿ ಕೂಡ ಸರಿಯಾಗಿ ಬಿಂಬಿಸಬೇಕು," ಎಂದು ಶ್ರೀಧರನ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries