ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಸಂಘದ ಬದಿಯಡ್ಕ ಘಟಕದ ಮಹಾಸಭೆ ಶುಕ್ರವಾರ ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಜರಗಿತು. ಬದಿಯಡ್ಕ ಘಟಕದ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಕಾಲಿಕ ಮರಣವನ್ನು ಹೊಂದಿದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಗುಣಾಜೆ ಶಿವಶಂಕರ ಭಟ್ ಭಾಗವಹಿಸಿ ಮಾತನಾಡಿದರು. ಈಶ್ವರ ನಾಯ್ಕ, ಗಣಪತಿ ಪ್ರಸಾದ, ಶ್ಯಾಂ ಭಟ್, ಸದಾನಂದ ನಾಯ್ಕ, ಉದನೇಶವೀರ ಕಿಳಿಂಗಾರು ಚರ್ಚೆಯಲ್ಲಿ ಪಾಲ್ಗೊಂಡರು. 2022 ಜ.4ರಂದು ಸೂರಂಬೈಲು ಎಡನಾಡು ಕಣ್ಣೂರು ಸಹಕಾರೀ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿರುವ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ನಂತರ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮೈರ್ಕಳ ನಾರಾಯಣ ಭಟ್, ಕಾರ್ಯದರ್ಶಿ ಉದನೇಶ ವೀರ ಕಿಳಿಂಗಾರು, ಜೊತೆಕಾರ್ಯದರ್ಶಿಯಾಗಿ ಕೇಶವ ಪ್ರಸಾದ ಕುಳಮರ್ವ, ಉಪಾಧ್ಯಕ್ಷರಾಗಿ ಕೆ.ಗಣಪತಿ ಪ್ರಸಾದ ಹಾಗೂ ಕಾರ್ಯಕಾರೀ ಸಮಿತಿಯನ್ನು ಆರಿಸಲಾಯಿತು. ಜಯಶ್ರೀ ಟೀಚರ್ ಮತ್ತು ವಿಶಾಲಾಕ್ಷಿ ಟೀಚರ್ ಪ್ರಾರ್ಥನೆ ಹಾಡಿದರು.




