ತಿರುವನಂತಪುರ: ಕೇರಳ ಸರ್ಕಾರದ ಪ್ರತಿಷ್ಠಿತ ಸಿಲ್ವರ್‍ಲೈನ್ ರೈಲ್ವೆ ಯೋಜನೆ 2025-26ರಲ್ಲಿ ಪೂರ್ತಿಗೊಳಿಸುವ ಬಗ್ಗೆ ಕೆ-ರೈಲ್ ಯೋಜನೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ 529.45ಕಿ.ಮೀ ದೂರವಿದ್ದು, ಯೋಜನೆ ಪೂರ್ತಿಗೊಂಡಲ್ಲಿ ಕಾಸರಗೋಡಿನಿಂದ ಈ ದೂರವನ್ನು ಕೇವಲ 3.54 ಗಂಟೆಯಲ್ಲಿ ತಲುಪಲು ಸಾಧ್ಯವಾಗಲಿದೆ. ಪ್ರತಿ ಕಿ.ಮೀಗೆ 2.75ರೂ. ದರ ನಿಗದಿಪಡಿಸಲಾಗಿದ್ದು, ಕಾಸರಗೋಡಿನಿಂದ ತಿರುವನಂತಪುರಕ್ಕೆ 1445ರೂ. ದರ ಅಂದಾಜಿಸಲಾಗಿದೆ. ತಾಸಿಗೆ 200ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದ್ದು, ಬಹಳಷ್ಟು ಸಮಯದ ಉಳಿತಾಯವಾಗಲಿದೆ. ಪ್ರಸಕ್ತ ಕಾಸರಗೋಡಿನಿಂದ ತಿರುವನಂತಪುರ ತಲುಪಲು ರೈಲಿಗೆ ಸುಮಾರು 12ರಿಂದ 14 ತಾಸು ತಗಲುತ್ತಿದೆ.
ಪ್ರಸಕ್ತ ಯೋಜನೆ ಜಾರಿಯಾದಲ್ಲಿ ಹಲವಾರು ಪ್ರಯೋಜನಗಳನ್ನೂ ಬೊಟ್ಟುಮಾಡಲಾಗಿದೆ. ತಿರುವನಂತಪುರದ ಟೆಕ್ನೋ ಪಾರ್ಕ್, ಕೊಚ್ಚಿಯ ಇನ್‍ಫೋ ಪಾರ್ಕ್, ಕೋಯಿಕ್ಕೋಡಿನ ಸೈಬರ್ ಪಾರ್ಕ್ ಮುಂತಾದ ಪ್ರಮುಖ ಕೇಂದ್ರಗಳಿಗೆ ಅತಿ ಶೀಘ್ರ ತಲುಪಬಹುದಾಗಿದೆ. ಚತುಷ್ಪಥ ಹಾದಿಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಕೆ-ರೈಲು ಮೂಲಕ ಪ್ರಯಾಣಿಸಬಹುದಾಗಿದೆ. ಪ್ರವಾಸೋದ್ಯಮಕ್ಕೂ ಹೆಚ್ಚಿನ ಅವಕಾಶ ಲಭಿಸಲಿದೆ. ಇನ್ನು ಬಯಲು ಪ್ರದೇಶ, ಹಿನ್ನೀರು ಪ್ರದೇಶದ ಸಂರಕ್ಷಣೆಗಾಗಿ 88ಕಿ.ಮೀ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಹಳಿಗಳ ಎರಡೂ ಬದಿ ರೈಲ್ವೆ ಕಾನುನಿನನ್ವಯ ತಡೆಬೇಲಿ ಮಾತ್ರ ಬರಲಿದೆ. ಯೋಜನೆ ಜಾರಿಯಾದಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ವಾರ್ಷಿಕ 530ಕೋಟಿ ರೂ. ಮೊತ್ತದ ಇಂಧನ ಉಳಿತಾಯವಾಗಲಿರುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. ಈ ಮಧ್ಯೆ ಯೋಜನೆ ಜಾರಿಗಾಗಿ ನಡೆಸಲಾಗಿರುವ ಸಿಲ್ವರ್‍ಲೈನ್ ಪ್ರಾಥಮಿಕ ಸಾಧ್ಯತಾ ಅಧ್ಯಯನ ವರದಿಗೂ, ಅಂತಿಮ ವರದಿಗೂ ಅಜಗಜಾಂತರವಿರುವುದು ಸಂಶಯಕ್ಕೆ ಕಾರಣವಾಗಿದೆ.
ಆದರೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಕೆ-ರೈಲು ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ. ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆ ಕೇರಳಕ್ಕೆ ಬೇಡ ಎಂಬುದಾಗಿ ಪರಿಸರ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




