HEALTH TIPS

74ನೇ ಸೇನಾ ದಿನಾಚರಣೆ: ದೇಶದ ರಕ್ಷಣೆ ಪ್ರಾಣ ಒತ್ತೆಯಿಟ್ಟ ಯೋಧರಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರಿಂದ ಗೌರವ ಸಲ್ಲಿಕೆ

    ನವದೆಹಲಿ: ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತದೆ. ಇದರ ಅಂಗವಾಗಿ ಪ್ರಮುಖ ನಾಯಕರು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಧೀರ ಯೋಧರನ್ನು ಸ್ಮರಿಸಿದ್ದಾರೆ. ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಅವರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ.

    ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಶುಭಾಶಯಗಳನ್ನು ಕೋರಿರುವ ಪ್ರಧಾನಿ ಮೋದಿಯವರು, ಭಾರತೀಯ ಸೇನೆಯು ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಭಾರತೀಯ ಸೇನೆಯ ಸಿಬ್ಬಂದಿ ಪ್ರತಿಕೂಲ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ ಮತ್ತು ನೈಸರ್ಗಿಕ ವಿಕೋಪಗಳು ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಗರೋತ್ತರ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನೆಯ ಅದ್ಭುತ ಕೊಡುಗೆಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ರಾಷ್ಟ್ರದ ಸುರಕ್ಷತೆಗಾಗಿ ಭಾರತೀಯ ಸೇನೆಯ ಅಮೂಲ್ಯ ಕೊಡುಗೆಗಳನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ, ರಾಷ್ಟ್ರೀಯ ಭದ್ರತೆ ಒದಗಿಸುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ. ಗಡಿ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ನಮ್ಮ ಸೈನಿಕರು ವೃತ್ತಿಪರತೆ, ತ್ಯಾಗ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಸೇವೆಗೆ ರಾಷ್ಟ್ರವು ಆಭಾರಿಯಾಗಿದೆ. ಯೋಧರಿಗೆ ಸೇನಾ ದಿನದ ಶುಭಾಶಯಗಳು' ಎಂದು ತಿಳಿಸಿದ್ದಾರೆ.


     ವೀರ ಯೋಧರಿಗೆ ಮೂರು ಪಡೆಗಳ ಮುಖ್ಯಸ್ಥರಿಂದ ನಮನ
      ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಮೂರು ಪಡೆಗಳ ಮುಖ್ಯಸ್ಥರು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ಗೌರವ ಸಲ್ಲಿಸಿದರು. ಜನರಲ್​​ ಮನೋಜ್​​​​​​ ಮುಕುಂದ್​ ನರವಾಣೆ, ಏರ್​​ ಚೀಫ್​ ಮಾರ್ಷಲ್​​ ವಿಆರ್​ ಚೌಧರಿ ಹಾಗೂ ಅಡ್ಮಿರ್ಲ್​​ ಆರ್​ ಹರಿ ಕುಮಾರ್​ ಈ ಸಮಾರಂಭದಲ್ಲಿ ಪಾಲ್ಗೊಂಡರು.

     ದೆಹಲಿಯ ಕಂಟೋನ್ಮೆಂಟ್​ನ ಕಾರ್ಯಪ್ಪ ಪರೇಡ್ ಗ್ರೌಂಡ್​ನಲ್ಲಿ ಮುಖ್ಯ ಪರೇಡ್ ನಡೆಯುತ್ತಿದ್ದು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಣೆ ಸಲ್ಯೂಟ್ ಪಡೆದರು. ಪ್ರತಿವರ್ಷದಂತೆ ಈ ಬಾರಿಯೂ ಯೋಧರು ಕವಾಯತು ಪ್ರದರ್ಶಿಸುತ್ತಿದ್ದು, ಯುದ್ಧೋಪಕರಣಗಳ ಪ್ರದರ್ಶನವೂ ನಡೆಯುತ್ತಿದೆ.

    ಈ ಬಾರಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನಿರ್ವಿುತ ಸ್ವದೇಶಿ ಹೊಸ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್, ಅಡ್ವಾನ್ಸ್ಡ್'ಲೈಟ್ ಹೆಲಿಕಾಪ್ಟರ್, ಡ್ರೋನ್​ಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿದುಬಂದಿದೆ. 

     ಭಾರತೀಯ ಸೇನೆಯಿಂದ ವಿಡಿಯೋ ಬಿಡುಗಡೆ
     ಸೇನಾ ದಿನದ ಅಂಗವಾಗಿ ಭಾರತೀಯ ಸೇನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಶಕ್ತಿ, ಸಾಮರ್ಥ್ಯ ಅನಾವರಣಗೊಂಡಿದೆ.

    ಫೀಲ್ಡ್ ಮಾರ್ಷಲ್ ಕೊಡಾಂಡೇರಾ ಎಂ. ಕಾರಿಯಪ್ಪ ಅವರ (ಆಗಿನ ಲೆಫ್ಟಿನೆಂಟ್ ಜನರಲ್) ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ ಭಾರತದಲ್ಲಿ ಪ್ರತಿವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಕೆ. ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ 15 ಜನವರಿ 1949 ರಂದು ಅಧಿಕಾರ ವಹಿಸಿಕೊಂಡರು.

    ಈ ದಿನವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತು ರಾಜ್ಯಗಳ ಎಲ್ಲಾ ಪ್ರಧಾನ ಕಚೇರಿಗಳಲ್ಲಿ ಮೆರವಣಿಗೆಗಳು ಮತ್ತು ಇತರ ಮಿಲಿಟರಿ ಪ್ರದರ್ಶನಗಳ ರೂಪದಲ್ಲಿ ಆಚರಿಸಲಾಗುತ್ತದೆ. ಇಂದು ಭಾರತ ತನ್ನ 74ನೇ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿದೆ. ದೇಶ ಮತ್ತು ನಾಗರಿಕರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಧೀರ ಸೈನಿಕರಿಗೆ ಗೌರವ ಸಲ್ಲಿಸಲು ಇಂದು ಪ್ರಮುಖ ದಿನವಾಗಿದೆ.

    ಸೇನಾ ದಿನಾಚರಣೆ ದೇಶಾದ್ಯಂತ ನಡೆಯುತ್ತಿದ್ದರೆ, ದೆಹಲಿ ಕಂಟೋನ್ಮೆಂಟ್‌ನ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಮುಖ್ಯ ಸೇನಾ ದಿನದ ಮೆರವಣಿಗೆಯನ್ನು ನಡೆಸಲಾಗುತ್ತದೆ. ಶೌರ್ಯ ಪ್ರಶಸ್ತಿಗಳು ಮತ್ತು ಸೇನಾ ಪದಕಗಳನ್ನು ಸಹ ಈ ದಿನ ನೀಡಲಾಗುತ್ತದೆ. ಕಳೆದ ವರ್ಷ 15 ಸೈನಿಕರಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಲಾಯಿತು. ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರು ಪ್ರತಿವರ್ಷ ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries