ಪೆರ್ಲ: ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ಲಭಿಸಿದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನಲ್ಲಿ ಜನವರಿ 3 ರಿಂದ ಒಪಿ ವಿಭಾಗ ಆರಂಭಗೊಂಡಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ರೋಗಿಗಳು ವೈದ್ಯಕೀಯ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಆದರೆ, ಸಂಚಾರ ಸಮಸ್ಯೆ ಎದುರಾಗಿದ್ದು, ಪ್ರಸ್ತುತ ಬೆಳಿಗ್ಗೆ 6.30 ಹಾಗೂ 9ರ ಮಧ್ಯೆ 3 ಕೆಎಸ್ ಆರ್ ಟಿ ಸಿ ಬಸ್ ಗಳು ಮೆಡಿಕಲ್ ಕಾಲೇಜು ಭಾಗಕ್ಕೆ ಸೇವೆ ನಡೆಸುತ್ತಿವೆಯಾದರೂ ಜಿಲ್ಲೆಯ ಇತರ ಭಾಗಗಳಿಂದ ಇಲ್ಲಿಗೆ ಬಸ್ ಸಂಚಾರವಿಲ್ಲ. ಕಾಞಂಗಾಡ್, ಮಂಜೇಶ್ವರ ವಲಯಗಳಿಂದ ಇಲ್ಲಿಗೆ ಯಾವ ಸಂಪರ್ಕ ವ್ಯವಸ್ಥೆಯೂ ಇಲ್ಲ. ಮಂಜೇಶ್ವರ, ಕಾಸರಗೋಡು ಭಾಗಗಳಿಂದ ಮೆಡಿಕಲ್ ಕಾಲೇಜು ಪ್ರದೇಶಕ್ಕೆ ಬಸ್ ಸಂಚಾರ ಆರಂಭಿಸಬೇಕಾದ ತುರ್ತು ಅಗತ್ಯವಿದೆ. ಪ್ರಸ್ತುತ ದಿನನಿತ್ಯ ನೂರಾರು ಮಂದಿ ಒಪಿ ವಿಭಾಗಕ್ಕೆ ತಲಪುತ್ತಿದ್ದು, ಇನ್ನಷ್ಟು ಮಂದಿ ಚಿಕಿತ್ಸೆಗಳಿಗೆ ವ್ಯವಸ್ಥೆಗಳಿದ್ದರೆ ಆಗಮಿಸುವ ನಿರೀಕ್ಷೆ ಇದೆ. ಜೊತೆಗೆ ಕರ್ನಾಟಕದ ಅಡ್ಯನಡ್ಕ, ಪೆರುವಾಯಿ, ವಿಟ್ಲ ಭಾಗಗಳಿಗೂ ಉಕ್ಕಿನಡ್ಕ ನಿಕಟವಾಗಿದ್ದು, ಉಪ್ಪಳ, ಪೈವಳಿಕೆ, ಬಾಯಾರು, ಬೆರಿಪದವು, ಪೆರುವಾಯಿ, ಕುದ್ದುಪದವು ಮೂಲಕ ಉಕ್ಕಿನಡ್ಕಕ್ಕೆ ಬಸ್ ಸಂಚಾರ ಬೇಕಾಗಿದೆ. ಈ ಬಗ್ಗೆ ಶಾಸಕರು ಸಚಿವರೊಂದಿಗೆ ಚರ್ಚಿಸಿದ್ದು ಅನುಕೂಲಕರ ಉತ್ತರ ಲಭಿಸಿದೆ ಎಂದು ಶಾಸಕರು ತಿಳಿಸಿದ್ದಾರೆ.




