ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಆದರೆ, ಪಾಕಿಸ್ತಾನವು ಇನ್ನೂ ಗಡಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಶನಿವಾರ ಹೇಳಿದ್ದಾರೆ.
ಭಾರತೀಯ ಸೇನಾ ದಿನದ ಪ್ರಯುಕ್ತ ದೆಹಲಿಯ ಕ್ಯಾಂಟ್‌ನಲ್ಲಿರುವ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಎಲ್‌ಒಸಿಯಲ್ಲಿ, ಕಳೆದ ವರ್ಷಕ್ಕಿಂತ ಪರಿಸ್ಥಿತಿ ಉತ್ತಮವಾಗಿದೆ ಆದರೆ ಪಾಕಿಸ್ತಾನವು ಇನ್ನೂ ಗಡಿಯ ಬಳಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಸುಮಾರು 300-400 ಭಯೋತ್ಪಾದಕರು ಭಾರತದ ಗಡಿ ನುಸುಳಲು ಕಾದು ಕುಳಿತಿದ್ದಾರೆ. ಈ ವರೆಗೂ ಒಟ್ಟು 144 ಭಯೋತ್ಪಾದಕರನ್ನು ಎನ್‌ಕೌಂಟರ್'ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಿದರು.
ಚೀನಾದ ಉದ್ವಿಗ್ನತೆಯಿಂದಾಗಿ ಕಳೆದ ವರ್ಷ ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ನಿಯಂತ್ರಣದಲ್ಲಿಡುವುದು ಸೇನೆಗೆ ಸವಾಲಾಗಿ ಪರಿಣಮಿಸಿತ್ತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಇತ್ತೀಚೆಗೆ ಎರಡು ದೇಶಗಳ ನಡುವೆ 14ನೇ ಸುತ್ತಿನ ಮಾತುಕತೆ ನಡೆಸಲಾಗಿತ್ತು. ಜಂಟಿ ಮಾತುಕತೆ ಬಳಿಕ ಇದೀಗ ಗಡಿ ರೇಖೆ ಬಳಿ ಪರಿಸ್ಥಿತಿ ಸಹಜ ಸ್ಥಿತಿ ಇದೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಭಾರತದ ಕೊಡುಗೆ ಕುರಿತು ಮಾತನಾಡಿದ ಅವರು, "ಭಾರತೀಯ ಸೇನೆಯು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಯಾವಾಗಲೂ ಮಹತ್ವದ ಕೊಡುಗೆ ನೀಡಿದೆ. ಇಂದಿಗೂ, ನಮ್ಮ ಸೇನೆಯ 5,000 ಕ್ಕೂ ಹೆಚ್ಚು ಸೈನಿಕರು ವಿವಿಧ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ದೇಶಕ್ಕೆ ವಿಭಿನ್ನ ಗುರ್ತಿಕೆಯನ್ನು ನೀಡುತ್ತಿದ್ದಾರೆಂದಿದ್ದಾರೆ.




