ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾಸರಗೋಡು ಜನಾರ್ಧನ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಸಿಟಿ ಸ್ಕ್ಯಾನ್ ಯಂತ್ರವನ್ನು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಉದ್ಘಾಟನೆ ಮಾಡಿ, ಸಾರ್ವಜನಿಕರಿಗೆ ಸಿಟಿ ಸ್ಕ್ಯಾನ್ ಯಂತ್ರದ ಮೂಲಕ ಉತ್ತಮ ಸೇವೆ ನೀಡುವ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಕರೆ ನೀಡಿ, ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಸಮಾರಂಭದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನುರವರು ಉಪಸ್ಥಿತರಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಆಸ್ಪತ್ರೆಯ ವತಿಯಿಂದ ಗೌರವಿಸಿ, ಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜನಾರ್ಧನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಕೆ. ಪಿ. ಸೂರಜ್ ಪೂಜ್ಯರ ಬೃಹತ್ ಮೊತ್ತದ ಕೊಡುಗೆಯನ್ನು ಸ್ಮರಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವತ್ ಪೂಜಾರಿ, ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲ್, ವೆಂಕಟರಮಣ ಹೊಳ್ಳ ಕಾಸರಗೋಡು ಉಪಸ್ಥಿತರಿದ್ದರು.




