ಕಾಸರಗೋಡು: ಶಿಥಿಲಗೊಂಡಿರುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರಿನಿಂದ ಎದುರ್ತೋಡು ವರೆಗಿನ ಕಾಮಗಾರಿ ಕೊನೆಗೂ ಪುನರಾರಂಭಗೊಂಡಿದ್ದು, ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಅಡ್ಕಸ್ಥಳ ವರೆಗಿನ ಅಭಿವೃದ್ಧಿಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಎದುರ್ತೋಡಿನಿಂದ ಎಡನೀರು ವರೆಗಿನ ಸುಮಾರು ಒಂದುವರೆ ಕಿ.ಮೀ ರಸ್ತೆ ಶಿಥಿಲಗೊಂಡ ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸುವ ಹಂತಕ್ಕೂ ಬಂದು ತಲುಪಿತ್ತು. ಗುತ್ತಿಗೆದಾರರ ಹಾಗೂ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಈ ರಸ್ತೆ ಕಾಮಗಾರಿ ಮೂಲೆಗುಂಪಾಗಿದ್ದು, ಪ್ರಯಾಣಿಕರು ಹಾಗೂ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಾಞಂಗಾಡು, ಕಾಸರಗೋಡು ಭಾಗದಿಂದ ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು, ವಿಟ್ಲ, ಪುತ್ತೂರು ತೆರಳುವ ಅಂತಾರಾಜ್ಯ ಸಂಚಾರದ ಹಲವಾರು ವಾಹನಗಳೂ ಇದೇ ರಸ್ತೆಯನ್ನು ಬಳಸುತ್ತಿದೆ. ರಸ್ತೆಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳದಿರುವುದನ್ನು ಪ್ರತಿಭಟಿಸಿ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಈ ಹಿಂದೆ ಎರಡು ತಿಂಗಳಿಗೂ ಹೆಚ್ಚುಕಾಲ ನೆಲ್ಲಿಕಟ್ಟೆ ಪ್ರದೇಶದಲ್ಲಿ ಜನಪರ ಹೋರಾಟ ಸಮಿತಿಯಿಂದ ಧರಣಿ ನಡೆಸಿದ ಪರಿಣಾಮ ತುರ್ತಾಗಿ ಗುತ್ತಿಗೆದಾರರು ಕೆಲಸ ಪುನರಾರಂಭಿಸಿದರೂ, ಅರ್ಧದಲ್ಲಿ ಕೆಲಸಬಿಟ್ಟು ತೆರಳಿದ್ದರು. ಪ್ರಸಕ್ತ ರಸ್ತೆಕಾಮಗಾರಿ ಆರಂಭಗೊಂಡಿದ್ದರೂ, ಕೆಲಸ ವಿಳಂಬವಾಗಿ ನಡೆಯುತ್ತಿರುವುದು ಜನರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.
ಅಭಿಮತ:
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಕಾಮಗಾರಿ ಎದುರ್ತೋಡಿನಿಂದ ಎಡನೀರು ವರೆಗೆ ಮಾತ್ರ ಬಾಕಿ ಉಳಿದಿದ್ದು, ಅಡ್ಕಸ್ಥಳ ವರೆಗೆ ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಎದುರ್ತೋಡಿನಿಂದ ಎಡನೀರು ವರೆಗಿನ ಕಾಂಕ್ರೀಟ್‍ಮಿಶ್ರಣ ಪೂರ್ತಿಗೊಳಿಸಿ, ಜ, 15ರ ನಂತರ ಡಾಂಬರೀಕರಣ ನಡೆಸಲಾಗುವುದು. ನಂತರ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ 19ಕಿ.ಮೀ ರಸ್ತೆಕೊನೆಯ ಲೇಯರ್ ಪೂರ್ತಿಗೊಳಿಸಲಾಗುವುದು.
ರಾಘವೇಂದ್ರ ಮಜಕ್ಕಾರ್, ಸಹಾಯಕ ಮಹಾ ಅಭಿಯಂತ
ಲೋಕೋಪಯೋಗಿ ಇಲಾಖೆ, ರಸ್ತೆವಿಭಾಗ, ಕಾಸರಗೋಡು

