ಪೆರ್ಲ: ರಾಜಶ್ರೀ ಟಿ.ರೈ ಪೆರ್ಲ ಅವರ 'ಅಗ್ಗಿಷ್ಟಿಕೆ' ಚೊಚ್ಚಲ ಕಥಾ ಸಂಕಲನವನ್ನು ಕನ್ನಡದ ಖ್ಯಾತ ಲೇಖಕಿ ವೈದೇಹಿ, ತಮ್ಮ ಸ್ವಗೃಹ ಅನಂತನಗರದ ಇರುವಂತಿಗೆಯಲ್ಲಿ ಗುರುವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಿದರು.
ವೈದೇಹಿಯವರ ಪತಿ ಶ್ರೀನಿವಾಸ ಮೂರ್ತಿ, ಲೇಖಕಿಯ ಕುಟುಂಬ ಸದಸ್ಯರು, ಆಪ್ತರು ಉಪಸ್ಥಿತರಿದ್ದರು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳು ಮತ್ತು ತುಳುವಿನಿಂದ ಇಂಗ್ಲಿಷ್, ಮಲೆಯಾಳಂ ಭಾಷೆಗೆ ತರ್ಜಮೆಗೊಂಡ ಕಥೆಗಳು ಸೇರಿ ರಾಜಶ್ರೀ ಟಿ.ರೈಯವರ ಹದಿನೆಂಟು ಕನ್ನಡ ಕಥೆಗಳು ಈ ಕಥಾ ಸಂಕಲನದಲ್ಲಿವೆ.
ರಾಜಶ್ರೀ ಟಿ.ರೈ ಪೆರ್ಲ ಈಗಾಗಲೇ ತುಳು ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.ಹಿರಿಯ ವಿದ್ವಾಂಸ ಹರಿಕೃಷ್ಣ ಭರಣ್ಯ ಅವರ ಮುನ್ನುಡಿ, ಖ್ಯಾತ ಸಾಹಿತಿ ಸದಾನಂದ ನಾರಾವಿ ಅವರ ಬೆನ್ನುಡಿಯ 'ಅಗ್ಗಿಷ್ಟಿಕೆ' ಕಥಾಸಂಕಲನವನ್ನು ಬೆಂಗಳೂರಿನ ಕಲ್ಪವೃಕ್ಷ ಪ್ರಕಾಶನ ಹೊರತಂದಿದೆ.

