ಬೆಂಗಳೂರು: ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಒಳ್ಳೆಯ ನಿರೀಕ್ಷೆ ಹೊಂದಿದ್ದರು. ಆದರೆ ಹರಾಜು ಆರಂಭವಾದ ಬಳಿಕ ಎಲ್ಲವೂ ತಲೆಕೆಳಗಾಗಿದೆ.
ಹೌದು.. ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಬೆಲೆಗೆ ಮಾರಾಟವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ವಾರ್ನರ್ ಕೇವಲ ರೂ. 6.25 ಕೋಟಿ ಬೆಲೆಗೆ ಮಾರಾಟವಾಗುವ ಮೂಲಕ ಆಚ್ಚರಿಗೆ ಕಾರಣವಾಗಿದ್ದಾರೆ. ಅವರನ್ನ ಆರ್‌ಸಿಬಿ ತಂಡ ವಶ ಪಡಿಸಿಕೊಳ್ಳಲು ಪೈಪೋಟಿ ನಡೆಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಾರು ನಿರೀಕ್ಷಿಸದ ರೀತಿಯಲ್ಲಿ ಕನಿಷ್ಠ ಮೊತ್ತಕ್ಕೆ ವಾರ್ನರ್ ಮಾರಾಟವಾಗಿದ್ದಾರೆ.
ಮುಂಬೈ ಇಂಡಿಯನ್ಸ್ ವಾರ್ನರ್ ಅವರನ್ನು ವಶಪಡಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸುಮ್ಮನಾಯಿತು. ಇದರೊಂದಿಗೆ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಡಿಮೆ ಬೆಲೆಗೆ ಮಾರಾಟವಾದರು. ವಾರ್ನರ್ ಈ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ವಾರ್ನರ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಬಿಡ್ ನಡೆಸುವುದರ ಹಿಂದೆ ಮತ್ತೊಮ್ಮೆ ಅವರನ್ನ ಅವಮಾನ ಮಾಡುವ ಉದ್ದೇಶವಿದೆಯ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಕಳೆದ ಸೀಸನ್‌ನಲ್ಲಿ SRH ಪರವಾಗಿ ವಾರ್ನರ್‌ಗೆ ಆದ ಅವಮಾನಗಳು ಅಷ್ಟಿಷ್ಟಲ್ಲ. ಐಪಿಎಲ್ ಸೀಸನ್ ಮಧ್ಯದಲ್ಲಿ ನಾಯಕತ್ವದಿಂದ ಕೆಳಗಿಳಿಸಿದ್ದೂ, ಜೊತೆಗೆ, ವಾರ್ನರ್ ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡರು ಮತ್ತು ಅಂತಿಮವಾಗಿ ಡ್ರಿಂಕ್ಸ್ ಬಾಯ್ ಆಗಿ ಸೇವೆ ಸಲ್ಲಿಸಿದರು.
ಇದನ್ನೆಲ್ಲಾ ನೋಡಿದ ವಾರ್ನರ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ. SRH ನಿಂದ ಅವಮಾನಿತರಾಗಿ ನಿರ್ಗಮಿಸಿದ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಯಾವ ರೀತಿಯ ವಿಧ್ವಂಸ್ವನ್ನ ಸೃಷ್ಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ದಾಖಲೆ ಬರೆದ ಇಶಾನ್ ಕಿಶನ್
ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾರ್ಖಂಡ್ ನ ಇಶಾನ್ ಕಿಶನ್ ಹಾಲಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಬರೆದಿದ್ದು, ಐಪಿಎಲ್ 2022 ಹರಾಜಿನ ಈವರೆಗಿನ ದುಬಾರಿ ಆಟಗಾರ ಎನಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಮೊತ್ತದ ಬಿಡ್ ಪಡೆದುಕೊಂಡ ಇಶಾನ್ ಕಿಶನ್ 15. 25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದರು.
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಇಶಾನ್ ಕಿಶನ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಶತಾಯಗತಾಯ ಇಶಾನ್ ಕಿಶನ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿದ್ದ ಆರಂಭದಿಂದಲೂ ದೊಡ್ಡ ಮೊತ್ತದ ಬಿಡ್ ಮಾಡಿ ಗಮನಸೆಳೆಯಿತು. ಇದರ ನಡುವೆ ಇಶಾನ್ ಕಿಶನ್ ಖರೀದಿಸಲು 14.50 ಕೋಟಿ ರುಪಾಯಿ ಬಿಡ್ ಮಾಡಿ ಸನ್‌ರೈಸರ್ಸ್ ಹೈದರಾಬಾದ್ ಅಚ್ಚರಿ ಮೂಡಿಸಿತು.
ಐಪಿಎಲ್ ಹರಾಜಿನಲ್ಲಿ ಈವರೆಗೂ 15 ಕೋಟಿ ಮೊತ್ತದ ಗಡಿ ದಾಟಿದ ಕೆಲವೇ ಕೆಲವು ಪ್ಲೇಯರ್ ಗಳಲ್ಲಿ ಇಶಾನ್ ಕಿಶನ್ ಒಬ್ಬರಾಗಿದ್ದಾರೆ. ಯುವರಾಜ್ ಸಿಂಗ್ 16 ಕೋಟಿಗೆ ಮಾರಾಟವಾಗಿದ್ದರೆ, ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು. ಆದರೆ, ಬೆನ್ ಸ್ಟೋಕ್ಸ್ ಅವರ 14.50 ಕೋಟಿ ರೂಪಾಯಿ ದಾಖಲೆಯನ್ನು ಇಶಾನ್ ಕಿಶನ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.




