ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಕೆಲ ವಿವಾದದಿಂದಾಗಿ ಮತ್ತೊಂದು ಗುಂಪಿನ ಮೇಲೆ ಬಾಂಬ್ ನೊಂದಿಗೆ ದಾಳಿ ನಡೆಸಲು ಯೋಜಿಸಿದ್ದ ತಂಡದಲ್ಲಿದ್ದ ವ್ಯಕ್ತಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರು ಕೂಡಾ ಅದೇ ತಂಡದಲ್ಲಿದ್ದವರು ಎಂದು ಪೊಲೀಸರು ಹೇಳಿದ್ದಾರೆ.
ವಿವಾಹ ಸಮಾರಂಭ ನಡೆಯುತ್ತಿದ್ದ ತೊಟ್ಟದ ಮನೆಯೊಂದರಲ್ಲಿ ಶನಿವಾರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಸ್ಥಳೀಯರ ಮಧ್ಯ ಪ್ರವೇಶದ ನಂತರ ವಿವಾದವನ್ನು ಬಗೆಹರಿಸಲಾಗಿತ್ತು. ನಂತರ ಭಾನುವಾರ ಬೆಳಗ್ಗೆ ವಿವಾಹ ನಡೆದಿದೆ. ತದನಂತರ ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿನಲ್ಲಿ ಮದುವೆ ಪಾರ್ಟಿ ಮುಂಭಾಗ ದಾಳಿ ನಡೆದಿದೆ. ವಧುವಿನ ಕಡೆಯವರು ಯಾರು ಕೂಡಾ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎದುರಾಳಿ ಗುಂಪಿನ ಕಡೆಗೆ ಎಸೆದ ಬಾಂಬ್ , ದಾಳಿ ನಡೆಸುತ್ತಿದ್ದ ಗುಂಪಿನ ಸದಸ್ಯ ಜಿಷ್ಣು ಎಂಬುವರ ಮೇಲೆ ಬಿದಿದ್ದು, ಆತನ ತಲೆ ಛಿದ್ರವಾಗಿದೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಸ್ಪೋಟಗೊಳ್ಳದ ಮತ್ತೊಂದು ಬಾಂಬ್ ವೊಂದನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.




