ಮುಂಬೈ: ಭಾರತದ ತಂದ ಸ್ಟಾರ್ ಆಟಗಾರ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಗೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ.. ಪ್ರೇಕ್ಷಕರ ಉಪಸ್ಥಿತಿಯಲ್ಲೇ ಮೊಹಾಲಿ ಟೆಸ್ಟ್ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಾಹಿತಿ ನೀಡಿದ್ದು, 'ಈ ಹಿಂದಿನ ವರದಿಯಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಮುಚ್ಚಿದ ಬಾಗಿಲುಗಳಲ್ಲಿ ಆಡಲಾಗುವುದಿಲ್ಲ. ಬದಲಿಗೆ ಪ್ರೇಕ್ಷಕರ ಉಪಸ್ಥಿತಿಯಲ್ಲೇ ಮೊಹಾಲಿ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ.
"ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಅನ್ನು ಮುಚ್ಚಿದ ಬಾಗಿಲುಗಳಲ್ಲಿ ನಡೆಸಲಾಗುವುದಿಲ್ಲ. ಪ್ರೇಕ್ಷಕರನ್ನು ಮೈದಾನಕ್ಕೆ ಅನುಮತಿಸುವ ನಿರ್ಧಾರವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ತೆಗೆದುಕೊಳ್ಳುತ್ತವೆ. ವಿವಿಧ ಅಂಶಗಳ ಆಧಾರದ ಮೇಲೆ, ನಾನು ಪಿಸಿಎ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ವಿರಾಟ್ ಕೊಹ್ಲಿ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡುವ ಐತಿಹಾಸಿಕ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸದಿಂದ ಈ ವರೆಗೂ ಪ್ರೇಕ್ಷಕರಿಲ್ಲದೇ ಟೂರ್ನಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಇದೀಗ ದೇಶದಲ್ಲಿನ COVID-19 ಪ್ರಕರಣಗಳಲ್ಲಿನ ಉತ್ತೇಜಕ ಕುಸಿತವು ಟೂರ್ನಿ ಆಯೋಜಕ ಅಸೋಸಿಯೇಷನ್‌ಗಳಿಗೆ ಜನಸಂದಣಿಯನ್ನು ಅನುಮತಿಸಲು ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಆರೋಗ್ಯ ಪ್ರಾಧಿಕಾರಗಳ ಸಲಹೆಗಳ ಆಧಾರದ ಮೇಲೆ ಅಭಿಮಾನಿಗಳು ಕೋಲ್ಕತ್ತಾದಲ್ಲಿ ಮೈದಾನದಲ್ಲಿ ಆಟ ಕಣ್ತುಂಬಿಕೊಂಡಿದ್ದರು. ಬಳಿಕ ಧರ್ಮಶಾಲಾ, ಯುಪಿಸಿಎ ಲಕ್ನೋ ಟಿ20ಐ ಪಂದ್ಯಕ್ಕೆ ಒಂದು ದಿನದ ಮೊದಲು ಮತದಾನದ ಕಾರಣ ಜನಸಂದಣಿಯಿಲ್ಲದೆ ಪಂದ್ಯ ಆಯೋಜನೆ ಮಾಡಲಾಗಿತ್ತು ಎಂದು ಜಯ್ ಶಾ ಹೇಳಿದ್ದಾರೆ.
"ನಾನು ನಿಜವಾಗಿಯೂ ವಿರಾಟ್ ಕೊಹ್ಲಿ ಅವರ 100 ನೇ ಟೆಸ್ಟ್‌ಗಾಗಿ ಎದುರು ನೋಡುತ್ತಿದ್ದೇನೆ ಮತ್ತು ನಮ್ಮ ಚಾಂಪಿಯನ್ ಕ್ರಿಕೆಟಿಗನಿಗೆ ಶುಭ ಹಾರೈಸುತ್ತೇನೆ. ಇದು ನಮ್ಮ ಅಭಿಮಾನಿಗಳಿಗೆ ಸವಿಯುವ ಸಂದರ್ಭವಾಗಿದೆ. ಅವರು ಮುಂಬರುವ ಹಲವು ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, ಆಯಾ ಕ್ರಿಕೆಟ್ ಅಸೋಸಿಯೇಷನ್ ಗಳು ಆಯಾ ರಾಜ್ಯ ಸರ್ಕಾರಗಳ ಮಾರ್ಗಸೂಚಿ ಮೇರೆಗೆ ಪ್ರೇಕ್ಷಕರಿಗೆ ಅನುಮತಿಸುವ ಕುರಿತು ಕ್ರಮ ಕೈಗೊಳ್ಳುತ್ತವೆ. ಇದರಲ್ಲಿ ಬಿಸಿಸಿಐ ನಿರ್ಬಂಧಗಳೇನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 4 ರಿಂದ ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿಯ 100 ನೇ ಟೆಸ್ಟ್ ಪಂದ್ಯ ನಡೆಯಲಿದೆ. ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಆಡಲಿದೆ. ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೆಸ್ಟ್ ಪಂದ್ಯಗಳಲ್ಲಿ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೊಹ್ಲಿ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಕೊಹ್ಲಿ 99 ಟೆಸ್ಟ್‌ಗಳಲ್ಲಿ 50.39 ಸರಾಸರಿಯಲ್ಲಿ 27 ಶತಕಗಳೊಂದಿಗೆ 7962 ರನ್ ಗಳಿಸಿದ್ದಾರೆ.




