ನವದೆಹಲಿ: ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ಕೋವಿಡ್-19 ಸಂಬಂಧಿತ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ವಿಮಾನದಲ್ಲಿನ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದ್ದು, ಅಂತರಾಷ್ಟ್ರೀಯ ವಿಮಾನಗಳಲ್ಲಿ 3 ಸೀಟ್ ಗಳನ್ನು ಖಾಲಿ ಇಡುವ ನಿಯಮವನ್ನೂ ಸಡಿಲಿಸಲಾಗಿದೆ.
ಇನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರಿಗೆ ಪ್ಯಾಟ್ ಡೌನ್ ಶೋಧ ಪ್ರಕ್ರಿಯೆಯನ್ನೂ ಪುನಾರಂಭಗೊಳಿಸಲು ಅವಕಾಶ ನೀಡಲಾಗಿದೆ. ಸುಗಮ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಕೋವಿಡ್-19 ನ ಇತ್ತೀಚಿನ ರೂಪಾಂತರಿ ತಳಿ ಓಮಿಕ್ರಾನ್ ನಿಂದ ಸೋಂಕು ಪ್ರಸರಣದಿಂದ ಭಾರತದ ವೈಮಾನಿಕ ಮಾರುಕಟ್ಟೆ ಈಗಷ್ಟೇ ಚೇತರಿಕೆ ಕಾಣುತ್ತಿದೆ. ಫೆಬ್ರವರಿ ತಿಂಗಳಲ್ಲಿ 76.96 ಲಕ್ಷ ದೇಶೀಯ ಪ್ರಯಾಣಿಕರು ವಿಮಾನದಲ್ಲಿ ಸಂಚರಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಜನವರಿ ತಿಂಗಳಿಗಿಂತ ಶೇ.20 ರಷ್ಟು ಏರಿಕೆ ಕಂಡಿದೆ.


