ಕಾಸರಗೋಡು: ಕಠಿಣ ಪರಿಶ್ರಮ ಮತ್ತು ದೃಢ ಮನಸ್ಸಿದ್ದಲ್ಲಿ ಜೀವನದಲ್ಲಿ ಗೆಲುವು ನಮ್ಮದಾಗಿಸಲು ಸಾಧ್ಯ ಎಂಬುದಾಗಿ ಎನ್‍ಎಸ್‍ಜಿ ಕಮಾಂಡೋ, ಶೌರ್ಯಚಕ್ರ ವಿಜೇತ ಪಿ.ವಿ ಮನೇಶ್ ತಿಳಿಸಿದ್ದಾರೆ.
ಅವರು ಪ್ರತ್ಯೇಕ ಪರಿಗಣನೆ ಅಗತ್ಯವಿರುವ ಶಿಶುಭವನದ ಮಕ್ಕಳಿಗಾಗಿ ವಿವಿಧ ವಲಯಗಳಲ್ಲಿನ ತಜ್ಞರನ್ನು ಪಾಲ್ಗೊಳ್ಳುವಂತೆ ಮಾಡಿ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸುವ ಕಾರ್ಯಕ್ರಮದನ್ವಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಂಟಿಯಾಗಿ ನಡೆಸಿದ 'ಪ್ರಯಾಣ್ 2022'ಎರಡನೇ ಹಂತದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
2008 ನ.26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ, ದೇಶಕ್ಕೆ ಅಭಿಮಾನ ತಂದುಕೊಟ್ಟ ಪಿ.ವಿ ಮನೇಶ್ ಅವರು ಸೈನಿಕರ ತ್ಯಾಗ ಮತ್ತು ಅವರ ಕರ್ತವ್ಯಗಳ ಬಗ್ಗೆ ಮಕ್ಕಳಿಗೆ ಮನನ ಮಾಡಿದರು. ಉತ್ತಮ ವಿದ್ಯಾಭ್ಯಾಸದೊಂದಿಗೆ ಉನ್ನತ ಹುದ್ದೆ ಅಲಂಕರಿಸುವುದು ಪ್ರತಿಯೊಬ್ಬರ ವಿದ್ಯಾರ್ಥಿಯ ಧ್ಯೇಯವಾಗಿರಬೇಕು. ಇದು ಆ ವಿದ್ಯಾರ್ಥಿ ತಮಗೆ ಕಲಿಸಿದ ಶಿಕ್ಷಕರಿಗೆ ನೀಡುವ ಗುರುದಕ್ಷಿಣೆಯಾಗಿದೆ ಎಂದು ತಿಳಿಸಿದರು.
ಎನ್‍ಎಸ್‍ಜಿ ಕಮಾಂಡೋ, ಶೌರ್ಯಚಕ್ರ ವಿಜೇತ ಪಿ.ವಿ ಮನೇಶ್ ಸಮಾರಂಭ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ಎಸ್ ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾತಾ ಅಧಿಕಾರಿ ಮಧುಸೂಧನನ್, ಜಿಲ್ಲಾ ಶಿಶು ಸಂರಕ್ಷಣಾ ಸಮಿತಿ ಅಧಿಕಾರಿ ಸಿ.ಎ ಬಿಂದು ಉಪಸ್ಥಿತರಿದ್ದರು. ಈ ಸಂದರ್ಭ ಪಿ.ವಿ ಮನೇಶ್ ಅವರನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಶಾಲು ಹೊದಿಸಿ, ಗೌರವಿಸಿದರು.




