ಚೆನ್ನೈ: ಡಿಎಂಕೆ ಪಕ್ಷವು 28 ವರ್ಷದ ಪ್ರಿಯಾ ಅವರನ್ನು ಚೆನ್ನೈ ಕಾರ್ಪೊರೇಷನ್ ಗೆ ಮೇಯರ್ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದು, ಈ ಮೂಲಕ ಮೇಯರ್ ಹುದ್ದೆಗೆ ಏರುತ್ತಿರುವ ಮೂರನೇ ಮಹಿಳೆ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಚೆನ್ನೈನಲ್ಲಿ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಮತ್ತು ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೆನ್ನೈನ ಇತಿಹಾಸದಲ್ಲಿ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆ ಪ್ರಿಯಾ. ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿದೆ. ಹಾಗಾಗಿ ಪ್ರಿಯಾ ಶೀಘ್ರದಲ್ಲೇ ಮೇಯರ್ ಆಗಿ ಔಪಚಾರಿಕವಾಗಿ ಆಯ್ಕೆಯಾಗಲಿದ್ದಾರೆ.
ಉತ್ತರ ಚೆನ್ನೈನ ತಿರುವಿ ಕಾ ನಗರದಿಂದ ಆರ್ ಪ್ರಿಯಾ ಟಿಎನ್ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 74 ರಿಂದ ಗೆದ್ದಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಡಿಎಂಕೆ ಬಹುಮತವನ್ನು ಗೆದ್ದುಕೊಂಡಿತು ಮತ್ತು 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯಿತಿಗಳಲ್ಲಿ ಜಯಗಳಿಸಿತು.
ಪಾಲಿಕೆಯಲ್ಲಿ 952, ಪುರಸಭೆಗಳಲ್ಲಿ 2,360 ಮತ್ತು ಪಟ್ಟಣ ಪಂಚಾಯಿತಿಯಲ್ಲಿ 4,389 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಚ್ಚರಿಯೆಂದರೆ, ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕೆ ಪಳನಿಸ್ವಾಮಿ (ಎಡಪ್ಪಾಡಿ, ಸೇಲಂ ಜಿಲ್ಲೆ) ಮತ್ತು ಓ ಪನ್ನೀರಸೆಲ್ವಂ (ಪೆರಿಯಕುಲಂ, ಥೇಣಿ ಜಿಲ್ಲೆ) ಸೇರಿದಂತೆ ಎಐಎಡಿಎಂಕೆ ನಾಯಕರ ತವರು ಜಿಲ್ಲೆಗಳೂ ಸೇರಿವೆ.




