ಮಧೂರು: ಭಕ್ತಿ ಶ್ರದ್ಧೆಯೊಂದಿಗೆ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರದಂತಹ ಭಗವತ್ಸೇವೆಯಲ್ಲಿ ಭಾಗಿಗಳಾಗುವುದರಿಂದ ನಮ್ಮಲ್ಲಿ ಪುಣ್ಯ ಸಂಚಲನವಾಗುತ್ತದೆ. ಈ ಮೂಲಕ ನಮಗೆ ಪುಣ್ಯ ಪ್ರಾಪ್ತಿಯಾಗುವ ಜತೆಯಲ್ಲಿ ನಮ್ಮಲ್ಲಿನ ದುರ್ಗುಣಗಳ ಹರಣವಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರಗಿದ ಮಂಡಲ ಸಂಕೀರ್ತನೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮಲ್ಲಿರುವ ಪಾಪವನ್ನು ದೂರಮಾಡಿ ಪುಣ್ಯ ಸಂಚಯನ ವೃದ್ಧಿಸುವುದಕ್ಕೆ ಭಜನೆಯೊಂದೇ ಸರಳ ಮಾರ್ಗ ಎಂದು ಅವರು ಹೇಳಿದರು.
ಮಧೂರು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು.ಟಿ.ಆಳ್ವ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಹಿರಿಯ ಧಾರ್ಮಿಕ ಮುಂದಾಳು ಕೇಶವ ಆಚಾರ್ಯ, ಕ್ಷೇತ್ರ ಸಂರಕ್ಷಣಾ ಸಮಿತಿಯ ರಾಜ್ಯ ಸದಸ್ಯ ಅಪ್ಪಯ್ಯ ನಾೈಕ್ ಮಧೂರು ಮೊದಲಾದವರು ಮಾತನಾಡಿದರು.
ಮಧೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಧವ ಮಾಸ್ತರ್, ಪತ್ರಕರ್ತ, ಕವಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮುರಳಿ ಗಟ್ಟಿ, ಮಂಜುನಾಥ ಕಾಮತ್, ಗಿರೀಶ್, ಮೋಹನ ಆಚಾರ್ಯ ಪುಳ್ಕೂರು, ರವೀಂದ್ರ ರೈ, ಜಯಾನಂದ ಕುಮಾರ್ ಹೊಸದುರ್ಗ, ಶಶಿಕಲಾ ಟೀಚರ್, ಉಷಾ ಟೀಚರ್, ಶೋಭಾ, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಪ್ರಭಾಶಂಕರ ಮಾಸ್ತರ್ ಸ್ವಾಗತಿಸಿ, ನಾರಾಯಣಯ್ಯ ಮಧೂರು ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.




