ಕಾಸರಗೋಡು: ಜಿಲ್ಲಾ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಟ್ರೇಡರ್ಸ್ ಫ್ಯಾಮಿಲಿ ವೆಲ್ಫೇರ್ ಬೆನಿಫಿಟ್ ಸ್ಕೀಂ ಅನ್ವಯ 'ಆಶ್ರಯ'ಯೋಜನೆಯನ್ವಯ ಕಳೆದ ಮೂರು ವರ್ಷದಲ್ಲಿ ಜಿಲ್ಲೆಯ ನೂರು ವ್ಯಾಪಾರಿ ಕುಟುಂಬಗಳಿಗೆ ಮೂರುವರೆ ಕೋಟಿ ರೂ. ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿರುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಮಾದರಿ ಯೋಜನೆಗೆ ಮೂರು ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾ. 2ರಂದು ಕಾಸರಗೋಡು ನಗರಸಭಾಂಗಣದ ಟಿ. ನಾಸಿರುದ್ದೀನ್ ನಗರದಲ್ಲಿ ಆಯೋಜಿಸಿರುವ'ಆಶ್ರಯ'ಕಾರ್ಯಕ್ರಮದಲ್ಲಿ ವ್ಯಾಪಾರಿ ಸದಸ್ಯರಿಗೆ 60ಲಕ್ಷಕ್ಕೂ ಹೆಚ್ಚು ಮೊತ್ತದ ಧನಸಹಾಯ ವಿತರಣೆ ನಡೆಸಲಾಗುವುದು. ವ್ಯಾಪಾರಿ ಸದಸ್ಯರೊಬ್ಬ ಮೃತಪಟ್ಟಲ್ಲಿ ಇತರ ಸದಸ್ಯರಿಂದ ತಲಾ ನೂರು ರೂ.ನಂತೆ ಸಂಗ್ರಹಿಸಿ, ಆ ಸದಸ್ಯನ ಸನಿಹದ ಬಂಧುಗಳಿಗೆ ವಿತರಿಸುವ ಯೋಜನೆಯನ್ನು ವ್ಯಾಪಾರಿ ಏಕೋಪನಾ ಸಮಿತಿ ಜಿಲ್ಲಾ ಘಟಕ ಜಾರಿಗೊಳಿಸಿದೆ. ಇದರ ಜತೆಗೆ ಕಾರ್ಪಸ್ ಫಂಡ್ ನೀಡಿ ಸದಸ್ಯರಾದವರಿಗೆ ಚಿಕಿತ್ಸಾ ವೆಚ್ಚವಾಗಿ 25ಸಾವಿರ ರೂ. ನೀಡುವ ಯೋಜನೆಯನ್ನೂ ಒಳಪಡಿಸಲಾಗಿದೆ. ವಿವಿಧ ಕಾರಣಗಳಿಂದ ಮೃತರಾಗುವ ಸಮಿತಿ ಸದಸ್ಯರಿಗೆ, ಘಟಕದ ಸಂಖ್ಯಾಬಲದ ಆಧಾರದಲ್ಲಿ ಪ್ರಸಕ್ತ ತಲಾ 3.31ಲಕ್ಷ ರೂ. ಮೊತ್ತ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಮಾ. 2ರಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜ್ಯಾಧ್ಯಕ್ಷ ಟಿ.ನಾಸಿರುದ್ದೀನ್ ಅವರ ಭಾವಚಿತ್ರ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೊಳಿಕ್ಕರ, ಹಂಸ ಪಾಲಾಯಿ, ಟಿ. ಇ ಇಲ್ಯಾಸ್, ಶಶಿಧರನ್ ಸಿ.ಎಸ್ ಉಪಸ್ಥಿತರಿದ್ದರು.




