ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷಗಳ ಹಿಂದೆ ಈ ಶಾಲೆಯ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗಿತ್ತು. ಜೀವಬೆದರಿಕೆ ಹಿನ್ನೆಲೆಯಲ್ಲಿ ವಿಷಯ ಬಹಿರಂಗಗೊಳಿಸದೆ ಸುಮ್ಮನಿದ್ದ ವಿದ್ಯಾರ್ಥಿನಿಯರು, ಇತ್ತೀಚೆಗೆ ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್‍ನಲ್ಲಿ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.
ಕೌನ್ಸೆಲಿಂಗ್‍ಗೆ ಮೊದಲೇ ಈ ವಿಷಯದ ಬಗ್ಗೆ ಊರಲ್ಲಿ ಚರ್ಚೆಯಾಗುತ್ತಿದ್ದರೂ, ದೂರುಗಳಿಲ್ಲದ ಕಾರಣ ಪೊಲೀಸರೂ ತನಿಖೆಗೆ ಮುಂದುವರಿದಿರಲಿಲ್ಲ. ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಪೊಲೀಸರು ಪೋಕ್ಸೋ ಅನ್ವಯ ಒಟ್ಟು ಏಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಆರೋಪಿಗಳಲ್ಲಿ ಕೆಲವರು ತಲೆಮರೆಸಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಮಧ್ಯೆ ಪ್ರಕರಣ ಮಾತುಕತೆ ಮೂಲಕ ಮುಚ್ಚಿಹಾಕಲು ಯತ್ನಿಸಿರುವ ಘಟನೆಯೂ ನಡೆದಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ಊರ್ಜಿತಗೊಳಿಸಿದ್ದಾರೆ.



