ನವದೆಹಲಿ: ಕಾರ್ಮಿಕ ಸಂಘಟನೆಗಳು ಸೋಮವಾರ ಮತ್ತು ಮಂಗಳವಾರ 2 ದಿನಗಳ ಮುಷ್ಕರಕ್ಕೆ ಕರೆ ನೀಡಿದ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಇಂಧನ ಸಚಿವಾಲಯ ಪತ್ರ ಬರೆದಿದೆ.
ಪ್ರಮುಖವಾದ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು. ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯದ ಚಟುವಟಿಕೆಗಳು ಯೋಜಿಸಿದ್ದರೆ, ಅವುಗಳನ್ನು ಮುಂದಿನ ದಿನಾಂಕಕ್ಕೆ ಮುಂದೂಡಬೇಕು. ಮುಷ್ಕರದ ವೇಳೆ ಎಲ್ಲಾ ರಾಜ್ಯಗಳು, ಎನ್‌ಎಲ್‌ಡಿಸಿ, ಆರ್‌ಎಲ್‌ಡಿಸಿ ಸೇರಿದಂತೆ ಇನ್ನಿತರ ಪ್ರಮುಖ ವಿದ್ಯುತ್ ಕೇಂದ್ರಗಳು ಕಟ್ಟೆಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಅಗತ್ಯವಿರುವಷ್ಟು ಕಲ್ಲಿದ್ದಲು ದಾಸ್ತಾನು ಅನ್ನು ಹೊಂದಿರದಿದ್ದರೆ ಆಮದು ಆಧಾರಿತ ವಿದ್ಯುತ್ ಸ್ಥಾವರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಅಲ್ಲದೆ ಈ ಕುರಿತ ಸುತ್ತೋಲೆಯನ್ನು ಸಹ ಕೇಂದ್ರ ಸರ್ಕಾರ ಶನಿವಾರ ಹೊರಡಿಸಿದೆ.




