ನವದೆಹಲಿ: ಮೀಡಿಯಾ ಒನ್ ಚಾನೆಲ್ ಮೇಲಿನ ನಿಷೇಧದ ಕುರಿತು ಸುಪ್ರೀಂ ಕೋರ್ಟ್ ಮುಂದಿನ ಮಂಗಳವಾರ ವಾದ ಆಲಿಸಲಿದೆ. ಘಟನೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಮಾಧ್ಯಮ ಮಾಲೀಕರಾದ ಬ್ರಾಡ್‍ಕಾಸ್ಟಿಂಗ್ ಲಿಮಿಟೆಡ್ ಮತ್ತು ಸಂಪಾದಕ ಪ್ರಮೋದ್ ರಾಮನ್ ಸೇರಿದಂತೆ ಚಾನೆಲ್‍ನ ಮೂವರು ಉದ್ಯೋಗಿಗಳು ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
ಹೈಕೋರ್ಟ್‍ನ ವಿಭಾಗೀಯ ಪೀಠವು ನಿಷೇಧವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಚಾನೆಲ್ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿಭಾಗೀಯ ಪೀಠದ ಕ್ರಮವನ್ನು ಚಾನೆಲ್ ಆಡಳಿತ ಮಂಡಳಿ ತೀವ್ರವಾಗಿ ಟೀಕಿಸಿದೆ. ಪ್ರಕರಣದ ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ ಗೃಹ ಇಲಾಖೆಯು ನೋಟಿಸ್‍ಗಳನ್ನು ಕಳುಹಿಸಿದೆ ಮತ್ತು ಅವರಿಗೆ ತಿಳಿಸದೆ ಕಡತಗಳನ್ನು ಪರಿಶೀಲಿಸಿದೆ. ಇದಾದ ಬಳಿಕ ತೀರ್ಪು ಪ್ರಕಟಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ನಿಷೇಧಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ, ತಡೆಯಾಜ್ಞೆ ಸೇರಿದಂತೆ ಕಡತವನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಸದ್ಯ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮೀಡಿಯಾ ಒನ್ ಚಾನೆಲ್ ಸ್ಥಗಿತಗೊಂಡಿದೆ.




