ತಿರುವನಂತಪುರ: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಎಡಪಕ್ಷಗಳ ಸಭೆ ಅನು ಮೋದನೆ ನೀಡಿದೆ. ಕನಿಷ್ಠ ಶುಲ್ಕವನ್ನು 10 ರೂ.ಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಚರ್ಚಿಸಲು ಎಲ್‍ಡಿಎಫ್ ಮಧ್ಯಾಹ್ನ ಸಭೆ ಸೇರಿತ್ತು.
ಕನಿಷ್ಠ ಪ್ರಯಾಣ ದರವನ್ನು 12 ರೂ.ಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿ ದರವನ್ನು 6 ರೂ.ಗೆ ಹೆಚ್ಚಿಸಬೇಕು ಎಂದು ಬಸ್ ಮಾಲೀಕರು ಒತ್ತಾಯಿಸಿದ್ದರು. ವಿದ್ಯಾರ್ಥಿಗಳ ರಿಯಾಯಿತಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಶೀಘ್ರವೇ ಸರ್ಕಾರಿ ಆದೇಶ ಹೊರಬೀಳಲಿದೆ. ಬಸ್ ದರದ ಬೆನ್ನಲ್ಲೇ ಆಟೋ ಟ್ಯಾಕ್ಸಿ ದರದಲ್ಲೂ ಏರಿಕೆಯಾಗುವ ಸೂಚನೆಗಳಿವೆ.
ಬಸ್ ದರ ಏರಿಕೆಗೆ ಆಗ್ರಹಿಸಿ ಇದೇ 24ರಿಂದ ಬಸ್ ಮಾಲೀಕರು ಮುಷ್ಕgಕ್ಕೆ ತೊಡಗಿಕೊಂಡಿದ್ದರು. ಇದರೊಂದಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು. ನಾಲ್ಕು ದಿನಗಳ ಮುಷ್ಕರದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಾರಿಗೆ ಸಚಿವ ಆಂಟನಿ ರಾಜು ಅವರು ಬಸ್ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಬಸ್ ಪ್ರಯಾಣ ದರ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ ನಂತರ ಮುಷ್ಕರ ಹಿಂಪಡೆಯಲಾಯಿತು.





