HEALTH TIPS

ಸ್ಮಾರಕ ಭವನಗಳು ಚಟುವಟಿಕೆಯ ಕೇಂದ್ರಗಳಾಗಬೇಕು: ಡಾ. ಸಿ.ಸೋಮಶೇಖರ್: ನಾಡೋಜ ಕಯ್ಯಾರರ ಹೆಸರಿನ ಕನ್ನಡ ಭವನ ನಿರ್ಮಾಣ ಸ್ಥಳ, ಕವಿತಾ ಕುಟೀರ ವೀಕ್ಷಣೆ

                 ಬದಿಯಡ್ಕ: ರಾಷ್ಟ್ರಭಕ್ತಿ, ನಾಡಪ್ರೀತಿಯ ಸಂಯೋಗವೇ ಕಯ್ಯಾರ ಕಿಂಞಣ್ಣ ರೈ. ಕಾಸರಗೋಡು ಕನ್ನಡನಾಡಿನ ಹೃದಯದ ಭಾಗವೆಂಬ ಕಯ್ಯಾರರ ಅಂತರಂಗದ ಪ್ರೀತಿಯ ಆಕ್ರೋಶಕ್ಕೆ ಸ್ಪಂದಿಸಿ ಅವರ ಹೆಸರಿನಲ್ಲಿ ಕರ್ನಾಟಕದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತನ್ನ ಸೇವೆಯ ವಿಸ್ತಾರದಿಂದ ಸಮಾಜ ಸೇರಿದ ವ್ಯಕ್ತಿಯಾಗಿದ್ದಾರೆ. ಕಯ್ಯಾರ ಕಿಂಞಣ್ಣ ರೈ ಅವರ ವ್ಯಕ್ತಿತ್ವ ಭೌತಿಕವಾಗಿ ಬಹಳ ಹಿರಿದು. ಹಿಮಾಲಯ ಸದೃಶವಾದ ವ್ಯಕ್ತಿತ್ವವನ್ನು ಹೊಂದಿದ, ಕನ್ನಡದ ಆತ್ಮವುಳ್ಳಂತಹ ವ್ಯಕ್ತಿಯ ಹೆಸರಿನಲ್ಲಿ ಗಡಿನಾಡ ಕನ್ನಡ ಭವನ ನಿರ್ಮಾಣದ ಯೋಗ ನಮ್ಮ ಪಾಲಿಗೆ ಒದಗಿ ಬಂದಿದೆ. ಸ್ಮಾರಕ ಭವನಗಳು ಕೇವಲ ಸ್ಮಾರಕಗಳಾಗಿಯೇ ಉಳಿಯದೆ ಚಟುವಟಿಕೆಯ ಕೇಂದ್ರವಾಗಬೇಕು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.


             ಹಿರಿಯ ಕವಿ ನಾಡೋಜ ದಿ.ಕಯ್ಯಾರ ಕಿಂಞಣ್ಣ ರೈ ಅವರ ಕವಿತಾ ಕುಟೀರಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು. ಕವಿಗಳು ತಮ್ಮ ಸೇವೆಯ ವಿಸ್ತಾರದಿಂದ ಸಮಾಜಕ್ಕೆ ಸೇರಿದ ವ್ಯಕ್ತಿಗಳಾಗುತ್ತಾರೆ. ಎಲ್ಲರನ್ನೂ ಆಕರ್ಷಿಸುವ ಹೆಸರಿನ ಭವ್ಯ ಗಡಿನಾಡ ಕನ್ನಡ ಭವನ ನಿರ್ಮಾಣವಾಗಲು ಎಲ್ಲರ ಸಹಕಾರ ಅಗತ್ಯ. ಸಾವು ಇರದ ಕವಿಗಳಾದ ಕಯ್ಯಾರರು ಸಮಾಜಕ್ಕಾಗಿ ದುಡಿದು ಇತಿಹಾಸದ ಭಾಗವಾಗಿದ್ದಾರೆ. ಕಾಸರಗೋಡಿನಲ್ಲಿ ಕನ್ನಡದ ಕಹಳೆಯನ್ನು ಊದಿದ ಮಹಾತ್ಮರು ಇವರಾಗಿದ್ದಾರೆ. ಕನ್ನಡದ ಆತ್ಮವುಳ್ಳಂತಹ ವ್ಯಕ್ತಿಯ ಹೆಸರಿನಲ್ಲಿ ಒಂದು ಕೋಟಿ ರೂಪಾಯಿಯನ್ನು ಗಡಿನಾಡ ಕನ್ನಡ ಭವನ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದರು.

              ಬಿಜೆಪಿ ಮುಖಂಡ, ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ವಕೀಲ ಕೆ.ಶ್ರೀಕಾಂತ್ ಅವರು ಮಾತನಾಡಿ ಕಯ್ಯಾರರ ಕನಸು ನನಸಾಗಬೇಕು. ಹಿಂದೆ ನಡೆದ ಕನ್ನಡದ ಹೋರಾಟಕ್ಕೆ ಬೆಂಬಲವಾಗಿ ಅವರು ಪತ್ರವನ್ನು ನೀಡಿದ ನೆನಪು ಇನ್ನೂ ಇದೆ. ಕಾಸರಗೋಡಿನ ಅಸ್ಮಿತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ, ಸಂಶೋಧನೆಗೆ ಅಗತ್ಯವುಳ್ಳ ಕೇಂದ್ರದ ನಿರ್ಮಾಣವು ಕನ್ನಡದ ಉಳಿವಿಗೆ ನೆರವಾಗಲಿದೆ ಎಂದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ ಮಹಾತ್ಮಗಾಂಧಿಯವರನ್ನು ಸ್ಪರ್ಶಿಸಿದ ಮಹಾನ್ ವ್ಯಕ್ತಿಯ ಮನೆಯಲ್ಲಿ ನಾವಿದ್ದೇವೆ. ಕಯ್ಯಾರರ ಕುರಿತಾಗಿ ನಡೆಯುವ ಎಲ್ಲ ಚಟುವಟಿಕೆಗಳು ಕಾಸರಗೋಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಸಾಮಾಜಿಕವಾದ ಸಮಸ್ಯೆಗಳ ಸೂಕ್ಷ್ಮವನ್ನು ಅರಿತ ಡಾ.ಸೋಮಶೇಖರ್ ಅವರು ಪ್ರಾಧಿಕಾರದ ಅಧ್ಯಕ್ಷರಾಗಿ ಉತ್ತಮ ಸ್ಥಾನದಲ್ಲಿರುವುದರಿಂದ ಇಂತಹ ಸೂಕ್ಷ್ಮ ನಡೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸವಿದೆ. ಕನ್ನಡದ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಲು ಸಾಧ್ಯವಿದೆ. ಕನ್ನಡ ಭವನ ನಿರ್ಮಾಣಕ್ಕೆ ಭೂಮಿಯನ್ನು ನೀಡಿದ ಕಯ್ಯಾರರ ಕುಟುಂಬವು ಇಂದು ಮಾದರಿಯಾಗಿದೆ ಎಂದರು.

                ಕರ್ನಾಟಕ ಗಡಿಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಜನಪ್ರತಿನಿಧಿಗಳಾದ ಜಯಂತಿ ಕುಂಟಿಕಾನ, ಅಶ್ವಿನಿ ನೀರ್ಚಾಲು, ನಳಿನಿ ಕೃಷ್ಣನ್, ಹರೀಶ್ ಗೋಸಾಡ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಜಿಲ್ಲಾ ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ, ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ರಾಜೇಶ್ ಮಾಸ್ತರ್ ಅಗಲ್ಪಾಡಿ, ಸುನಿಲ್ ಪಿ.ಆರ್., ಕಯ್ಯಾರರ ಮಕ್ಕಳು, ಸೊಸೆಯಂದಿರು ಪಾಲ್ಗೊಂಡಿದ್ದರು.  ಅಧ್ಯಾಪಿಕೆಯರಾದ ಜ್ಯೋತ್ಸ್ನಾ ಕಡಂದೇಲು ಹಾಗೂ ಪ್ರಭಾವತಿ ಕೆದಿಲಾಯ ಪ್ರಾರ್ಥನೆ ಹಾಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಡಿ.ಶಂಕರ ನಿರೂಪಿಸಿದರು. ಕಯ್ಯಾರರ ಪುತ್ರ ಡಾ. ಪ್ರಸನ್ನ ರೈ ಸ್ವಾಗತಿಸಿ, ಅವಿನಾಶ್ ರೈ ವಂದಿಸಿದರು. ನಂತರ ಡಾ. ಸೋಮಶೇಖರ್ ಅವರು ಕಯ್ಯಾರರ ಕವಿತಾ ಕುಟೀರವನ್ನು ಹಾಗೂ ಕುಟುಂಬವು ದಾನ ಮಾಡಿದ ಸ್ಥಳವನ್ನು ವೀಕ್ಷಿಸಿದರು.


             ಅಭಿಮತ:

        ಜಿಲ್ಲಾಪಂಚಾಯಿತಿಗೆ ದಾನವಾಗಿ ನೀಡಿದ ಸ್ಥಳದಲ್ಲಿ ಕನ್ನಡದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಿದೆ. ದುಡಿಮೆಯೇ ದೇವರು ಎಂದು ನಂಬಿದ ತಂದೆಯವರ ಆಶಯ ಸಾಕಾರಗೊಳ್ಳಬೇಕಿದೆ. ಕರ್ನಾಟಕ ಸರಕಾರವು ಕಯ್ಯಾರ ಕಿಂಞಣ್ಣರೈ ಕನ್ನಡ ಭವನಕ್ಕೆ ಹಣ ಮಂಜೂರಾತಿ ನೀಡಿರುವುದು ಜೀವಕಳೆ ಬಂದಂತಾಗಿದೆ. ಈ ಸ್ಥಳದಲ್ಲಿ ಶೀಘ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಿ ಸಮಸ್ತರಿಗೆ ಉಪಕಾರವಾಗಲಿ.

                                    - ಡಾ. ಪ್ರಸನ್ನ ರೈ, ಕಯ್ಯಾರರ ಪುತ್ರ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries