ಬದಿಯಡ್ಕ: ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯಂತಹ ಮಹಾಕವಿ ನಮ್ಮ ಅಭಿಮಾನ. ಅವರು ಕೇರಳ ಕರ್ನಾಟಕದ ಮಾತ್ರವಲ್ಲದೆ ದೇಶದ ಅಮೂಲ್ಯ ಸಂಪತ್ತಾಗಿದ್ದವರು. ಕೃತಿ ರಚಿಸಿ ಬಹುಭಾಷಾ ಸಂಗಮ ಭೂಮಿಯಲ್ಲಿ ಭಾಷಾ ಒಗ್ಗಟ್ಟನ್ನು ಸಾರಿದವರು. ಅವರ ಸ್ಮರಣೆಯನ್ನು ನಿತ್ಯ ನಿರಂತರವಾಗಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಈ ವರ್ಷದ ಬಜೆಟಲ್ಲಿ ಕೇರಳ ಸರ್ಕಾರವು ಕನ್ನಡ ಸಾಹಿತ್ಯ ಅಕಾಡೆಮಿ ನಿರ್ಮಾಣಕ್ಕಾಗಿ 40ಲಕ್ಷ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ. 2ಕೋಟಿಯ ಯೋಜನೆ ಇದಾಗಿದ್ದು ಮೊದಲಿಗೆ 40 ಲಕ್ಷ ಮೊತ್ತವನ್ನು ಮೀಸಲಿರಿಸಿದೆ.
ಕರ್ನಾಟಕ ಸರ್ಕಾರವೂ ಇದೇ ಅಗತ್ಯಕ್ಕಾಗಿ 1ಕೋಟಿ ಮೀಸಲಿರಿಸಿದೆ. ಅಂತೆಯೇ ಜಿಲ್ಲಾ ಪಂಚಾಯತು ಕೂಡಾ ಬಜೆಟಲ್ಲಿ ಈ ಪ್ರಾಜೆಕ್ಟ್ ಗಾಗಿ ಮೊತ್ತ ಮಂಜೂರು ಮಾಡುವಂತೆ ಭರವಸೆ ನೀಡಿದೆ. ಕಾಸರಗೋಡಿನ ಜನತೆಯನ್ನು ಭಾಷೆ, ಜಾತಿ ಮತಗಳ ಭೇದ ತೋರದೆ ಪ್ರೀತಿಸಿದ ಮಹಾಕವಿಯ ಸವಿನೆನಪಿಗಾಗಿ ಗಡಿನಾಡಿನ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರದ ಪ್ರತಿಯೊಬ್ಬರೂ ತಮ್ಮ ಸಹಾಯ ಸಹಕಾರ ನೀಡಿಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಅವರು ಕಯ್ಯಾರರ ಮನೆಯನ್ನು ಶನಿವಾರ ಸಂದರ್ಶಿಸಿ ಮಾತನಾಡಿದರು.
ಬದಿಯಡ್ಕ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಸೀತಮ್ಮ ಪುರುಷನಾಯಕ ಗ್ರಂಥಾಲಯ ಹಾಗೂ ಕನ್ನಡ ಭವನ ನುಳ್ಳಿಪ್ಪಾಡಿ ಇದರ ಸ್ಥಾಪಕ ವಾಮನ ರಾವ್ ಬೇಕಲ್, ಸಲಾಂ ಕನ್ಯಪ್ಪಾಡಿ, ಪ್ರೊ.ಎ..ಶ್ರೀನಾಥ್, ಕಯ್ಯಾರರ ಪುತ್ರಾದ ಪ್ರಸನ್ನ ರೈ ಹಾಗೂ ಪ್ರದೀಪ್ ರೈ, ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ, ರವಿಕಾಂತ ಕೇಸರಿ ಕಡಾರು, ದೈವ ನೃತ್ಯ ಕಲಾವಿದ ಮನು ಪಣಿಕ್ಕರ್, ಗಾಯಕ ವಸಂತ ಬಾರಡ್ಕ, ಸಂಗಮ ಕಲಾ ವೇದಿಕೆಯ ಚಂದ್ರಶೇಖರ ಕುರುಪ್, ಜಗದೀಶ್ ಕೂಡ್ಲು, ರಾಮ ಬದಿಯಡ್ಕ, ಬದ್ರುದ್ದೀನ್ ಮಾಸ್ತರ್, ಮಾಜಿ ಪಂಚಾಯತು ಸದಸ್ಯ ಅನ್ವರ್ ಓಝೋನ್ ಉಪಸ್ಥಿತರಿದ್ದರು. ನಿರಂಜನ್ ರೈ ಪೆರಡಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆರತಿ ರೈ ವಂದಿಸಿದರು.
ಈ ಸಂದರ್ಭದಲ್ಲಿ ಶಾಸಕರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಸಿ ಸೋಮಶೇಖರ್ ಅವರ ಜತೆ ದೂರವಾಣಿ ಮೂಲಕ ಮಾತನಾಡಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಅವಲೋಕನ ನಡೆಸಿದರು.




