HEALTH TIPS

ತೈಲಾಘಾತದ ಹೊಡೆತ: ಕಚ್ಚಾತೈಲ, ಅಡುಗೆ ಎಣ್ಣೆ, ಚಿನ್ನ ದಾಖಲೆ ಜಿಗಿತ

            ನವದೆಹಲಿ: ರಷ್ಯಾ - ಯೂಕ್ರೇನ್ ಸಮರ ಬಿಕ್ಕಟ್ಟು ಮತ್ತು ಇತರ ವಿದ್ಯಮಾನಗಳ ಪರಿಣಾಮ ಜಾಗತಿಕ ಅರ್ಥವ್ಯವಸ್ಥೆ ತಲ್ಲಣಗೊಂಡಿದೆ. ಕಚ್ಚಾತೈಲ ದರ ಬ್ಯಾರೆಲ್​ಗೆ 130 ಡಾಲರ್​ಗೆ ಏರಿಕೆ ಕಂಡಿರುವುದು ಒಂದೆಡೆಯಾದರೆ, ರೂಪಾಯಿ ಮೌಲ್ಯ ಕುಸಿತ, ಅಡುಗೆ ಎಣ್ಣೆ, ಚಿನ್ನದ ಬೆಲೆ ಭಾರೀ ಏರಿಕೆ ಕಂಡಿರುವುದು ಜನಸಾಮಾನ್ಯರ ಬದುಕಿಗೆ ಹೊಡೆತ ಕೊಟ್ಟಿದೆ.

            ಭಾರತದ ಷೇರುಪೇಟೆಯಲ್ಲಿ ಸೋಮವಾರ ಬಿಎಸ್​ಇ ಸೆನ್ಸೆಕ್ಸ್ 1,491.06 ಅಂಶ (2.74%) ಕುಸಿದು 52,842.75 ಅಂಶ, ಎನ್​ಎಸ್​ಇ ನಿಫ್ಟಿ 382.20 (2.35%) ಕುಸಿದು 15,863.15 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ. ಷೇರುಪೇಟೆ ನಷ್ಟದ ವಹಿವಾಟಿನ ಕಾರಣ ಹೂಡಿಕೆದಾರರು ಸೋಮವಾರ 5.9 ಲಕ್ಷ ಕೋಟಿ ರೂ.ಕಳೆದುಕೊಂಡಿದ್ದಾರೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್​ಇಂಡ್ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್​ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಮಹಿಂದ್ರಾ ಆಂಡ್ ಮಹಿಂದ್ರಾ ಕಂಪನಿಯ ಷೇರು ಮೌಲ್ಯ ಶೇಕಡ 7.63ರಷ್ಟು ಕುಸಿತ ಕಂಡವು.

ಭಾರ್ತಿ ಏರ್​ಟೆಲ್, ಎಚ್​ಸಿಎಲ್ ಟೆಕ್ನಾಲಜಿ, ಟಾಟಾ ಸ್ಟೀಲ್, ಇನ್ಪೋಸಿಸ್ ಷೇರುಮೌಲ್ಯ ವೃದ್ಧಿಯಾಗಿವೆ. ಷೇರುಪೇಟೆಯಲ್ಲಿ ಲಭ್ಯ ತಾತ್ಕಾಲಿಕ ಡೇಟಾ ಪ್ರಕಾರ ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಷೇರುಪೇಟೆಯಲ್ಲಿ 7,631.02 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

              4 ದಿನಗಳಲ್ಲಿ 11.28 ಲಕ್ಷ ಕೋಟಿ ರೂ. ನಷ್ಟ: ರಷ್ಯಾ ಮತ್ತು ಯೂಕ್ರೇನ್ ಸಂಘರ್ಷದ ಕಾರಣ ಷೇರುಪೇಟೆಯಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ಹೂಡಿಕೆದಾರರು ಕಳೆದುಕೊಂಡ ಸಂಪತ್ತು ಬರೋಬ್ಬರಿ 11,28,214.05 ಕೋಟಿ ರೂಪಾಯಿ. ಫೆ.2ರಿಂದೀಚೆಗಿನ ದತ್ತಾಂಶ ಗಮನಿಸಿದರೆ, ಹೂಡಿಕೆದಾರರು 29 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವನ್ನು ಅನುಭವಿಸಿದ್ದಾರೆ.

ಕಚ್ಚಾ ತೈಲ ಗಗನಮುಖಿ: ಜಾಗತಿಕ ವಿದ್ಯಮಾನಗಳ ಕಾರಣ ಕಚ್ಚಾತೈಲ ದರ ಗಗನಮುಖಿಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 130 ಡಾಲರ್ ದಾಟಿ ಮುಂದೆ ಹೋಗಿದೆ. 2008ರಿಂದೀಚೆಗೆ ಇದು ಗರಿಷ್ಠ ದರವಾಗಿ ದಾಖಲಾಗಿದೆ.

           ರಷ್ಯಾ ರಿಯಾಯಿತಿ: ಭಾರತಕ್ಕೆ ಕಚ್ಚಾ ತೈಲವನ್ನು ಶೇಕಡ 25ರಿಂದ ಶೇಕಡ 27 ಕಡಿಮೆ ಬೆಲೆಗೆ ಪೂರೈಸುವುದಾಗಿ ರಷ್ಯಾ ತೈಲ ಕಂಪನಿಗಳು ಆಫರ್ ನೀಡಿವೆ. ಯುರೋಪ್ ಒಕ್ಕೂಟ, ಅಮೆರಿಕ ನಿರ್ಬಂಧದ ಬೆನ್ನಿಗೆ ರಷ್ಯಾ ಕಂಪನಿಗಳು ಭಾರತದ ಮಾರುಕಟ್ಟೆಯ ಕಡೆಗೆ ಹಚ್ಚಿನ ಗಮನಕೇಂದ್ರೀಕರಿಸಿವೆ. ರಷ್ಯಾ ಸರ್ಕಾರದ ರೋಸ್​ನೆಫ್ಟ್ ಕಂಪನಿ ಈ ರೀತಿ ಆಫರ್ ನೀಡಿರುವುದು ಎಂದು ಮೂಲಗಳು ತಿಳಿಸಿವೆ.

                ಆರ್​ಬಿಐಗೆ ತೈಲ ಕಂಟಕ: ಕಚ್ಚಾ ತೈಲ ಮತ್ತು ಖಾದ್ಯ ತೈಲ ಬೆಲೆ ಏರಿಕೆ ಕಾರಣ ಹಣದುಬ್ಬರ ಪ್ರಮಾಣ ಹಿಂದೆಂದಿಗಿಂತಲೂ ವೇಗವಾಗಿ ಏರುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಗದಿ ಪಡಿಸಿದ್ದ ಶೇಕಡ 2ರಿಂದ ಶೇಕಡ 6ರ ಮೇಲ್ಮಟ್ಟದ ಮಿತಿಯನ್ನು ಮೀರಿ ಇದು ಮುಂದುವರಿದಿದೆ.

           ರೂಪಾಯಿಗೆ ಆಘಾತ: ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ವೇಳೆ ಭಾರತದ ರೂಪಾಯಿ ಮೌಲ್ಯ 84 ಪೈಸೆ ಇಳಿದು ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 77.01 ರೂಪಾಯಿಯಲ್ಲಿ ದಿನದ ವಹಿವಾಟು ಮುಗಿಸಿದೆ. ಶುಕ್ರವಾರ ರೂಪಾಯಿ ಮೌಲ್ಯ 76.17 ರೂಪಾಯಿ ಆಗಿತ್ತು. ಇದು 2021ರ ಡಿಸೆಂಬರ್ 15ರ ಮಟ್ಟವಾಗಿತ್ತು. ಕರೆನ್ಸಿ ಮಾರುಕಟ್ಟೆಯಲ್ಲಿ ಯೆನ್ ಮತ್ತು ಡಾಲರ್​ಗಳು ಬಲಿಷ್ಠ ಅಸೆಟ್ ಆಗಿ ಗೋಚರಿಸಿದವು.

ಅಡುಗೆ ಎಣ್ಣೆ ಖರೀದಿಗೆ ಮಿತಿ: ಬೆಳಗಾವಿ: ರಾಜ್ಯದಲ್ಲಿ ಅಡುಗೆ ಎಣ್ಣೆ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ಮಾ.6ರಿಂದಲೇ ನಗರ ಪ್ರದೇಶಗಳ ದೊಡ್ಡ ಮಾರಾಟ ಮಳಿಗೆಗಳಲ್ಲಿ ಅಡುಗೆ ಎಣ್ಣೆ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಒಬ್ಬರಿಗೆ ತಲಾ 1 ಲೀಟರ್ ಇರುವ 2 ಪ್ಯಾಕೆಟ್ ಇಲ್ಲವೆ 5 ಲೀಟರ್​ನ ಒಂದು ಕ್ಯಾನ್ ಕೊಡುತ್ತಿದ್ದಾರೆ. ಬೇಡಿಕೆಯಷ್ಟು ಅಡುಗೆ ಎಣ್ಣೆ ಪೂರೈಕೆಯಾಗಿಲ್ಲ. ಹಾಗಾಗಿ, ಖರೀದಿಗೆ ಮಿತಿ ಹಾಕಲಾಗಿದೆ ಎಂದು ಮಾರಾಟ ಮಳಿಗೆ ಸಿಬ್ಬಂದಿ ತಿಳಿಸಿದ್ದಾರೆ.

                     ಖಾದ್ಯ ತೈಲ ಗಗನಮುಖಿ

           : ಖಾದ್ಯ ತೈಲಗಳ ಬೆಲೆಯೂ ಗಗನಕ್ಕೇರಿದೆ. 2022ರ ಜನವರಿಯಲ್ಲಿ ಪಾಮ್ ಆಯಿಲ್ 10 ಲೀ. ಬಾಕ್ಸ್​ಗೆ 1162 ರೂ., ಸೂರ್ಯಕಾಂತಿ 10 ಲೀ. ಬಾಕ್ಸ್​ಗೆ 1335 ರೂ., ವನಸ್ಪತಿ 10. ಲೀ. ಬಾಕ್ಸ್​ಗೆ 1130 ರೂ., ಅಡುಗೆ ಎಣ್ಣೆ 1230 ರೂ. ಹಾಗೂ ದೀಪದ ಎಣ್ಣೆ 1250 ರೂ. ಇತ್ತು. ಜನವರಿಗೆ ಹೋಲಿಸಿದರೆ ಈಗ ಪ್ರತಿ 10 ಲೀಟರ್ ಬಾಕ್ಸ್ ಮೇಲೆ ಅಂದಾಜು 500 ರೂ. ಏರಿಕೆ ಕಂಡಿದೆ. ಮಾರ್ಚ್ ಮೊದಲ ವಾರಾಂತ್ಯಕ್ಕೆ ಪಾಮ್ ಆಯಿಲ್ 10 ಲೀ. ಬಾಕ್ಸ್​ಗೆ 1560 ರೂ., ಸೂರ್ಯಕಾಂತಿ 1610 ರೂ., ವನಸ್ಪತಿ 1550 ರೂ., ಅಡುಗೆ ಎಣ್ಣೆ 1540 ರೂ. ಹಾಗೂ ದೀಪದ ಎಣ್ಣೆ 1590 ರೂ. ಇತ್ತು. ಸದ್ಯ ಮಾ.7 ರಂದು ಪಾಮ್ ಆಯಿಲ್ 1580 ರೂ., ಸೂರ್ಯಕಾಂತಿ 1620 ರೂ., ವನಸ್ಪತಿ 1550 ರೂ., ಅಡುಗೆ ಎಣ್ಣೆ 1640 ರೂ. ಹಾಗೂ ದೀಪದ ಎಣ್ಣೆ 1660 ರೂ.ಗೆ ಹೆಚ್ಚಳವಾಗಿದೆ.

                                 ಮತ್ತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ?

          : ಕರೊನಾದಿಂದ ಉದ್ಯೋಗ ನಷ್ಟ ಹಾಗೂ ವ್ಯಾಪಾರ ಸ್ಥಗಿತದಂತಹ ಸಂಕಷ್ಟಕ್ಕೆ ಸಿಲುಕಿ ಕಷ್ಟಪಟ್ಟಿದ್ದ ಜನಸಾಮಾನ್ಯರು ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಬಿಸಿಗೆ ಅಣಿಯಾಗಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಾಗಣೆ ವೆಚ್ಚವೂ ದುಬಾರಿಯಾಗಲಿದೆ. ಇದರಿಂದಾಗಿ ಎಲ್ಪಿಜಿ, ತೊಗರಿಬೇಳೆ, ಅಡುಗೆ ಎಣ್ಣೆ, ಕಬ್ಬಿಣ ಮತ್ತು ಸ್ಟೀಲ್ ಸೇರಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿವೆ. ಕರೊನಾ ಆರಂಭವಾದಗಿನಿಂದ ಶೇ.97 ಕುಟುಂಬಗಳ ಆದಾಯದಲ್ಲಿ ಕುಸಿತವಾಗಿದೆ. ಎರಡು ವರ್ಷದಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಅಂದಾಜು 270 ರೂ. ಹೆಚ್ಚಳವಾಗಿದೆ. ಪ್ರಸ್ತುತ ಸಬ್ಸಿಡಿ ರಹಿತ ಸಿಲಿಂಡರ್ ದರ 902 ರೂ.ಇದೆ. ಮತ್ತೆ 25 ರೂ.ನಿಂದ 50 ರೂ. ಹೆಚ್ಚಳವಾಗಬಹುದು.

ಬಂಗಾರ, ಬೆಳ್ಳಿ ತುಟ್ಟಿ: ದೆಹಲಿಯ ಚಿನವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ 1,298 ರೂ. ಏರಿದ್ದು, 53, 784 ರೂ.ಆಗಿದೆ. ಶುಕ್ರವಾರ 52,486 ರೂಪಾಯಿ ಇತ್ತು. ಬೆಳ್ಳಿಯ ದರ ಕಿಲೋಗೆ 1,910 ರೂ.ಗೆಏರಿದ್ದು 70,977 ರೂ. ಆಗಿದೆ. ಶುಕ್ರವಾರ ಇದು 69,067 ರೂ. ಇತ್ತು


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries