ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತ ಸರ್ಕಾರ ಹೆಚ್ಚುವರಿ 15,200 ಕೋಟಿ ರೂ ನೆರವು ನೀಡಲು ಮುಂದಾಗಿದೆ.
ಚೀನಾದ ಪ್ರಭಾವದಿಂದ ಶ್ರೀಲಂಕಾವನ್ನು ಹೊರತರಲು, ದ್ವೀಪ ರಾಷ್ಟ್ರಕ್ಕೆ ಇನ್ನೂ 200 ಕೋಟಿ ಡಾಲರ್ (15,200 ಕೋಟಿ ರೂ) ಹಣಕಾಸಿನ ನೆರವು ನೀಡಲು ಭಾರತ ಸರ್ಕಾರ ಸಿದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾವನ್ನು ಹೆಚ್ಚಾಗಿ ಅವಲಂಬಿಸಿದ್ದ ಶ್ರೀಲಂಕಾವನ್ನು ಮರಳಿ ತನ್ನ ಪ್ರಭಾವದ ಪರಿಧಿಗೆ ತಂದುಕೊಳ್ಳಲು ಕೇಂದ್ರ ಸರ್ಕಾರ, ದ್ವೀಪ ರಾಷ್ಟ್ರಕ್ಕೆ ಅಗತ್ಯ ಆಹಾರ ಮತ್ತು ಇಂಧನ ಪೂರೈಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, 'ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಶ್ರೀಲಂಕಾ ಬಾಹ್ಯ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಘೋಷಿಸಿಕೊಂಡಿರುವುದು ಕಳವಳಕಾರಿ. ಆದರೂ, ನಾವು ಅವರಿಗೆ ಇನ್ನೂ 200 ಕೋಟಿ ಡಾಲರ್‌ವರೆಗೆ ಹಣಕಾಸು ನೆರವು ಮತ್ತು ಬೆಂಬಲ ನೀಡಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.
ಶ್ರೀಲಂಕಾಕ್ಕೆ ಚೀನಾವು ಸುಮಾರು 350 ಕೋಟಿ ಡಾಲರ್ ಸಾಲ ನೀಡಿದೆ. ಜತೆಗೆ ದ್ವೀಪ ರಾಷ್ಟ್ರದಲ್ಲಿ ಬಂದರುಗಳು ಮತ್ತು ರಸ್ತೆಗಳನ್ನು ನಿರ್ಮಿಸಿದೆ. ಹೀಗಾಗಿ ‘ಚೀನಾದ ಸಾಲ ತೀರಿಸಲು ಶ್ರೀಲಂಕಾವು ಭಾರತದ ನೆರವು ಕೇಳಿತ್ತು. ಇದಕ್ಕೆ ಭಾರತವು ಸಕರಾತ್ಮಕವಾಗಿ ಸ್ಪಂದಿಸಿದ್ದು, ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಶ್ರೀಲಂಕಾಕ್ಕೆ ಅಗತ್ಯ ನೆರವು ನೀಡಲು ಭಾರತ ಉತ್ಸುಕವಾಗಿದೆ. ಜತೆಗೆ ಪ್ರಬಲ ಪಾಲುದಾರನಾಗಿಸಿಕೊಳ್ಳಲು ಬಯಸುತ್ತಿದೆ’ ಎಂದು ಮತ್ತೊಂದು ಮೂಲ ಹೇಳಿದೆ.


