ಕಾಸರಗೋಡು: ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸರ್ಕಾರ ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಪುನಶ್ಚೇತನಗೊಳಿಸಿದ ಮೊಗ್ರಾಲ್‍ಪುತ್ತೂರು ಬೆದ್ರಡ್ಕದ ಕೆಇಎಲ್-ಇಎಂಎಲ್ ಸಂಸ್ಥೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಜೆಟ್‍ನಲ್ಲಿ ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನಕ್ಕೆ ಐದಂಶ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಜವುಳಿ, ಇಲೆಕ್ಟ್ರಾನಿಕ್ಸ್ ಸೇರಿದಂತೆ ಪ್ರಮುಖ ಉದ್ದಿಮೆಗಳ ಅಭಿವೃದ್ಧಿಗೆ ಹಣ ಮೀಸಲಿರಿಸಲಾಗಿದೆ. ಸೊರಗುತ್ತಿರುವ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಧೋರಣೆ ಸರಿಯಲ್ಲ. ಕೇರಳ ಸರ್ಕಾರ ಇಂತಹ ಉದ್ದಿಮೆಗಳನ್ನು ಉಳಿಸಿಕೊಂಡು, ಅವುಗಳ ಅಭಿವೃದ್ಧಿಗೆ ಯೋಜನೆ ತಯಾರಿಸಲಿದೆ. ಕೆಇಎಲ್-ಇಎಂಎಲ್ ಸಂಸ್ಥೆಯನ್ನು ಖಾಸಗೀಕರಣದ ಭೀತಿಯಿಂದ ಪಾರುಮಾಡಿ, ಕೇರಳ ಸರ್ಕಾರದ ಅಧೀನದಲ್ಲೇ ಯಶಸ್ವಿಯಾಗಿ ಮುಂದುವರಿಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ, ಕಾನೂನು ಖಾತೆ ಸಚಿವ ಪಿ.ರಾಜೀವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಇಎಲ್-ಇಎಂಎಲ್ ಸಂಸ್ಥೆಯನ್ನು ಮೂರು ವರ್ಷ ಅವಧಿಯೊಳಗೆ ಲಾಭದತ್ತ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉತ್ಪಾದನಾ ಕ್ಷಮತೆಗೆ ತಕ್ಕಂತೆ ಕಾರ್ಮಿಕರ ವೇತನವನ್ನೂ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಎಂ.ರಾಜಗೋಪಲ್, ಎ.ಕೆ.ಎಂ ಅಶ್ರಫ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಸಂಸದ ಪಿ.ಕರುಣಾಕರನ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರಥಮ ಆರ್ಡರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಸಚಿವ ಪಿ.ರಾಜೀವ್ ಅವರಿಗೆ ಸಲ್ಲಿಸಿದರು.





