ಕಾಸರಗೋಡು: ಚಟ್ಟಂಚಾಲ್ ಕೈಗಾರಿಕಾ ಪಾರ್ಕ್‍ನಲ್ಲಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಆರಂಭಗೊಂಡ ಜಿಲ್ಲೆಯ ಮೊದಲ ಆಮ್ಲಜನಕ ಘಟಕವನ್ನು ಕೈಗಾರಿಕೆ ಹಾಗೂ ಕಾನೂನು ಖಾತೆ ಸಚಿವ ಪಿ. ರಾಜೀವ್ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಖಾಸಗಿ ವಲಯದಲ್ಲಿ ಉದ್ದಿಮೆ ಆರಂಭಿಸಲು ಕೈಗಾರಿಕೋದ್ಯಮಿಗಳು ಮುಂದೆ ಬಂದು 10 ಎಕರೆ ಭೂಮಿ ಕಂಡುಕೊಂಡಲ್ಲಿ, ಮೂಲಸೌಕರ್ಯ ಅಭಿವೃದ್ಧಿ ಸೌಲಭ್ಯದ ಜತೆಗೆ ಖಾಸಗಿ ಕೈಗಾರಿಕಾ ಪಾರ್ಕನ್ನು ಸರ್ಕಾರ ಮಂಜೂರುಮಾಡಿಕೊಡಲಿರುವುದಾಗಿ ತಿಳಿಸಿದರು.
ಉದುಮ ಶಾಸಕ, ನ್ಯಾಯವಾದಿ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ವೈದ್ಯಕೀಯ ವಲಯಕ್ಕಿರುವ ಆಮ್ಲಜನಕದ ಮೊದಲ ಆದೇಶವನ್ನು ಸ್ವೀಕರಿಸಿದರು. ಇಂಡಸ್ಟ್ರಿಯಲ್ ಆಕ್ಸಿಜನ್ ಮೊದಲ ಆದೇಶವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಸ್ವೀಕರಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಕುಟುಂಬಶ್ರೀ ಆವರ್ತನ ನಿದಿಯನ್ನುü ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ವಿತರಿಸಿದರು. ಆಕ್ಸಿಜನ್ ಸಿಲಿಂಡರ್ ಚಾಲೆಂಜನ್ನು ಸ್ವೀಕರಿಸಿ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದ ಕೇರಳ ಆಟೋಮೊಬೈಲ್ ವರ್ಕ್‍ಶಾಪ್ ಮಾಲೀಕರ ಸಂಘ, ಕ್ವಾಲಿಟಿ ಟ್ರೇಡರ್ಸ್ ಕಾಸರಗೋಡು, ಕೆಇಎ ಕುವೈತ್, ಬಿಜು ಟ್ರೇಡರ್ಸ್ ಕಾಸರಗೋಡು, ಕೇರ್ ಸಿಸ್ಟಮ್ ಕೊಚ್ಚಿ ಮತ್ತು ನಿರ್ಮಿತಿ ಕೇಂದ್ರ ಪದಾಧಿಕಾರಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.





