ಕಾಸರಗೋಡು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಒಂಬತ್ತು ಕಾಲೋನಿಗಳನ್ನು ಅಂಬೇಡ್ಕರ್ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದಕ್ಕಾಗಿ 9 ಕೋಟಿ ರೂ. ಮಂಜೂರು ಮಾಡಲಾಗಿದೆ. ಉದುಮ ಕ್ಷೇತ್ರದ ವಡಕ್ಕೆಕ್ಕರ ಕಾಲೋನಿ, ಮೇಲ್ಬರಂಬ ಕಾಲೋನಿ ಮತ್ತು ಮಂಜೇಶ್ವರ ಕ್ಷೇತ್ರದಲ್ಲಿ ಬಾಡೂರು ಎಸ್.ಸಿ. ಕಾಲೋನಿ, ಪುಲಿಕುತ್ತಿ ಎಸ್‍ಸಿ ಕಾಲೋನಿ, ಕಾಞಂಗಾಡು ಕ್ಷೇತ್ರದ ಮೈಕಾನಂ ಎಸ್.ಸಿ. ಕಾಲೋನಿ, ಕಾಸರಗೋಡು ಕ್ಷೇತ್ರದಲ್ಲಿ ಚೇನಕೋಡು ಎಸ್.ಸಿ ಕಾಲೋನಿ, ನೆಲ್ಲಿಕುನ್ನು ಎಸ್‍ಸಿ. ಕಾಲೋನಿ, ತೃಕ್ಕರಿಪ್ಪುರ್ ಕ್ಷೇತ್ರದಲ್ಲಿ ಓಲಾಟ್ ಎಸ್.ಸಿ. ಕಾಲೋನಿ, ಕಾಂತಿಲೋಟ್ ದಕ್ಷಿಣ ಉತ್ತರ ಎಸ್‍ಸಿ ಕಾಲೋನಿಗಳಿಗೆ ಈ ಮೊತ್ತ ನಿಗದಿಪಡಿಸಲಾಗಿದೆ.
ಜಿಲ್ಲಾ ನಿರ್ಮಿತಿ ಕೇಂದ್ರ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ. ಅಂಬೇಡ್ಕರ್ ಗ್ರಾಮವು ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಕ್ಷೇತ್ರವಾರು ಎರಡು ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಮೂಲ ಅಭಿವೃದ್ಧಿ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದೆ. ಯೋಜನೆಯನ್ವಯ ಇಲಾಖೆ ಪ್ರತಿ ಕಾಲನಿಗೆ 1 ಕೋಟಿ ರೂ. ವ್ಯಯಮಾಡಲಿದೆ. ಯೋಜನೆಯು ಫೆಬ್ರವರಿ 2023 ರೊಳಗೆ ಪೂರ್ಣಗೊಳಿಸಲು ಯೋಜನೆಯಿರಿಸಿಕೊಳ್ಳಲಾಗಿದೆ. 2017-18ನೇ ಸಾಲಿನಲ್ಲಿ 10 ಕಾಲೋನಿಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.


