ಕಾಸರಗೋಡು: ಭಾಷಾ ಅಲ್ಪಸಂಖ್ಯಾತರಿಗೆ ಅವರು ಅರ್ಜಿ ಸಲ್ಲಿಸುವ ಭಾಷೆಯಲ್ಲೇ ಉತ್ತರ ನೀಡುವಂತೆ ಕಾಸರಗೋಡು ಜಿಲ್ಲಾಧಿಕಾರಿ ನೀಡಿರುವ ಆದೇಶಕ್ಕೆ ಅಧಿಕಾರಿಗಳು ಕೊನೆಗೂ ಸ್ಪಂದಿಸಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಕುಂಬಳೆಯ ಬಿ. ಸುಬ್ರಹ್ಮಣ್ಯ ನಾಯಕ್ ಅವರು ಕಿರು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತಗೆ ಸಲ್ಲಿಸಿದ್ದ ದೂರೊಂದಕ್ಕೆ ಕಚೇರಿಯಿಂದ ಕನ್ನಡದಲ್ಲೇ ಉತ್ತರ ಲಭಿಸಿದೆ. ಕುಂಬಳೆ ಗ್ರಾಪಂ ವ್ಯಾಪ್ತಿಯ ಕುಂಬಳೆ ನದಿ ಬದಿ ತಡೆಗೋಡೆ ನಿರ್ಮಿಸಿ ಉಪ್ಪುನೀರು ಹರಿಯುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಸುಬ್ರಹ್ಮಣ್ಯ ಅವರು ಮುಖ್ಯಮಂತ್ರಿಗಳ ದೂರು ಪರಿಹಾರ ಅದಾಲತ್'ಸಾಂತ್ವನ ಸ್ಪರ್ಶ'ಗೆ ದೂರು ಸಲ್ಲಿಸಿದ್ದರು.
ಈ ಅರ್ಜಿ ಸಂಬಂಧ ಅಧಿಕಾರಿಗಳು ಮಲಯಾಳದಲ್ಲಿ ಉತ್ತರ ನೀಡಿದ್ದರು. ಈ ಬಗ್ಗೆ ಕಾರ್ಯನಿರ್ವಾಹಕ ಅಭಿಯಂತಗೆ ಪತ್ರ ಬರೆದು ಕಾಮಗಾರಿಯ ಎಸ್ಟಿಮೇಟ್‍ನ ಯಥಾ ನಕಲು ಹಾಗೂ ಸಂಬಂಧಪಟ್ಟ ವಿವರಣೆಯನ್ನು ಕನ್ನಡದಲ್ಲಿ ನೀಡುವಂತೆ ವಿನಂತಿಸಿದ್ದರು. ಅರ್ಜಿದಾರನಿಗೆ ಕನ್ನಡದಲ್ಲಿ ಪ್ರತ್ಯುತ್ತರ ನೀಡಲು ಅಗತ್ಯ ವಯವಸ್ಥೆಯಿಲ್ಲದಿರುವುದರಿಂದ ಆಡಳಿತ ಭಾಷೆ ಮಲಯಾಳದಲ್ಲಿ ಉತ್ತರ ನೀಡವುದಾಗಿ ತಿಳಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಜಿಲ್ಲಾ ಭಾಷಾ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅವರಿಗೆ ಸುಬ್ರಹ್ಮಣ್ಯ ನಾಯಕ್ ದೂರು ಸಲ್ಲಿಸಿದ್ದರು. ಅರ್ಜಿದಾರರು ಕೇಳಿರುವ ಮಾಹಿತಿಯನ್ನು ಕನ್ನಡ ಭಾಷೆಯಲ್ಲೇ ನೀಡಬೇಕು ಹಾಗೂ ಇದರ ನಕಲನ್ನು ತನ್ನ ಕಚೇರಿಗೂ ಕಳುಹಿಸಿಕೊಡಬೇಕು ಎಂದು ಆದೇಶಿಸಿದ್ದರು. ಇಂತಹ ತಪ್ಪುಗಳಾಗದಂತೆ ಗಮನಹರಿಸುವಂತೆಯೂ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.




