ಶ್ರೀನಗರ: ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದನೆಯ ಜತೆ ನಂಟು ಹೊಂದಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲರೊಬ್ಬರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.
ಶ್ರೀನಗರದ ಕಾಶ್ಮೀರ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮೊಹಮ್ಮದ್ ಹುಸೇನ್ ವಜಾಗೊಂಡವರು.
'ಪಿಂಚಣಿ ಸಂಬಂಧಿತ ಕಾನೂನಿನ ನಿಬಂಧನೆಗಳಡಿ ಪ್ರೊ.ಹುಸೇನ್ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪ್ರತ್ಯೇಕತಾವಾದಿಗಳ ರಹಸ್ಯ ಸಿದ್ಧಾಂತ ಹಾಗೂ ಹಿಂಸೆಯನ್ನು ಸಮರ್ಥಿಸುವ ಭಯೋತ್ಪಾದನೆಯ ಜಾಲದೊಂದಿಗೆ ನಂಟು ಹೊಂದಿರುವ ವಿಶ್ವಾಸಾರ್ಹ ಪುರಾವೆಗಳಿದ್ದರೆ ಪಿಂಚಣಿ ಸ್ಥಗಿತಗೊಳಿಸಲು ಕಾನೂನಿನಡಿ ಅವಕಾಶವಿದೆ' ಎಂದು ಮೂಲಗಳು ತಿಳಿಸಿವೆ.
2016ರಲ್ಲಿ ನವದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆದ 'ಆಜಾದಿ' -ದಿ ಓನ್ಲಿ ವೇ' ಸಮಾವೇಶದಲ್ಲಿ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗಿಲಾನಿ, ಲೇಖಕಿ ಅರುಂಧತಿ ರಾಯ್ ಹಾಗೂ ಇತರರೊಂದಿಗೆ ಪಾಲ್ಗೊಂಡಿದ್ದ ಪ್ರೊ.ಹುಸೇನ್ ಅವರ ವಿರುದ್ಧ ಭಾರತ ವಿರೋಧಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಐಪಿಸಿ 124 ಎ (ದೇಶದ್ರೋಹ), 120 ಬಿ (ಅಪರಾಧ ಪಿತೂರಿ) ,149 ( ಕಾನೂನುಬಾಹಿರ ಸಭೆ) ಪ್ರಕರಣ ದಾಖಲಿಸಿದ್ದರು.





