ಕಾಸರಗೋಡು: 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸ್ಥಳೀಯಾಡಳಿತ ಸಂಸ್ಥೆಗಳ ಆಶ್ರಯದಲ್ಲಿ ರಾಜ್ಯ ಸರ್ಕಾರ ಕಲ್ಪಿಸಿರುವ ‘ನನ್ನ ಉದ್ಯೋಗ ನನ್ನ ಹೆಮ್ಮೆ’ ಅಭಿಯಾನ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಕೇರಳ ನಾಲೆಡ್ಜ್ ಎಕಾನಮಿ ಮಿಷನ್, ಕುಟುಂಬಶ್ರೀ ಮತ್ತು ಕಿಲಾ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಕೇರಳದ ಪ್ರತಿ ಮನೆಯನ್ನೂ ಕೇಂದ್ರೀಕರಿಸುವ ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ 18 ರಿಂದ 59 ವರ್ಷದೊಳಗಿನ ವಿದ್ಯಾವಂತ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಡೇಟಾವನ್ನು ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿದೆ. ಇದಕ್ಕಾಗಿ ಕುಟುಂಬಶ್ರೀ ಗಣತಿದಾರರು ಮೇ 8ರಿಂದ 15ರವರೆಗೆ ಒಂದು ವಾರದಲ್ಲಿ ಜಲಕಂ ಎಂಬ ಮೊಬೈಲ್ ಅಪ್ಲಿಕೇಶನ್‍ನೊಂದಿಗೆ ಮನೆ-ಮನೆಗೆ ಬರಲಿದ್ದಾರೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಸುಬ್ರಮಣಿಯನ್, ಕಿಲಾ ಸಂಚಾಲಕ ರಾಜಾರಾಂ ಹಾಗೂ ಜಿಲ್ಲಾ ತರಬೇತಿ ತಂಡದ ಸದಸ್ಯರಾದ ರತೀಶ್, ರೇಶ್ಮಿ ಮಾತನಾಡಿದರು. ಕೇರಳ ನಾಲೆಡ್ಜ್ ಎಕಾನಮಿ ಮಿಷನ್ ಪ್ರತಿನಿಧಿ ಸಿಬಿ ಸ್ವಾಗತಿಸಿ, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ರೇಷ್ಮಾ ವಂದಿಸಿದರು.




