ಥಾಣೆ: ಬೆಳಗಿನ ಚಹಾದ ಜೊತೆಗೆ ಸೊಸೆ ಉಪಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಸೊಸೆ ಮೇಲೆ ಮಾವ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಆರೋಪಿ ಕಾಶಿನಾಥ ಪಾಂಡುರಂಗ ಪಾಟೀಲ ಎಂದು ಗುರುತಿಸಲಾಗಿದೆ. ಗುಂಡು ಹೊಟ್ಟೆಗೆ ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟಾವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹಿರಿಯ ಇನ್ಸ್ ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಳಗಿನ ಚಹಾದ ಜೊತೆಗೆ ಸೊಸೆ ಉಪಹಾರವನ್ನು ನೀಡದೇ ಇದ್ದುದರಿಂದ ಕೋಪಗೊಂಡಿದ್ದ ಮಾವ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಯ ಮತ್ತೊಬ್ಬ ಸೊಸೆ ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.