ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಮುಂದೆ ಹನುಮಾನ್ ಚಾಲೀಸ ಪಠಿಸುವುದಾಗಿ ಸವಾಲು ಹಾಕಿದ್ದ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರನ್ನು ಮುಂಬೈ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದ ಮೇಲೆ ಉಪನಗರ ಖಾರ್‌ನಲ್ಲಿರುವ ನಿವಾಸದಿಂದ ರಾಣಾ ದಂಪತಿಯನ್ನು ಬಂಧಿಸಲಾಗಿದೆ.
ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಮುಂದೆ ಹನುಮಾನ್ ಚಾಲೀಸ ಪಠಿಸುವುದಾಗಿ ರಾಣಾ ದಂಪತಿ ಘೋಷಿಸಿದ್ದರು. ಆದರೆ ಹನುಮಾನ್ ಚಾಲೀಸ ಪಠಿಸುವು ತಮ್ಮ ನಿರ್ಧಾರವನ್ನು ಈ ದಂಪತಿ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಗಿದೆ.
ರಾಣಾ ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿ ನೆಲೆಯಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವುದು), ಮುಂಬಯಿ ಪೊಲೀಸ್ ಕಾಯ್ದೆಯ ಸೆಕ್ಷನ್ 135ರ ಅಡಿ (ಪೊಲೀಸರ ನಿಷೇಧ ಆದೇಶಗಳನ್ನು ಉಲ್ಲಂಘಿಸುವುದು) ಪ್ರಕರಣ ದಾಖಲಿಸಲಾಗಿದೆ.
ನಾಗ್ಪುರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು, ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಇಡೀ ಪ್ರಕರಣವನ್ನು ನಿಭಾಯಿಸುವ ರೀತಿ "ತುಂಬಾ ಬಾಲಿಶವಾಗಿದೆ". ತನ್ನ ವೈಫಲ್ಯಗಳನ್ನು ಮುಚ್ಚಿಡಲು ರಾಜ್ಯ ಸರ್ಕಾರ, ಇದು ಬಿಜೆಪಿ ಪ್ರಾಯೋಜಿತ ಎಂದು ಆರೋಪಿಸುತ್ತಿದೆ ಎಂದು ಹೇಳಿದ್ದಾರೆ.

.jpg)
