ವಾರಾಣಸಿ: ತನ್ನ ಆವರಣದೊಳಗೆ ಮೇ 6 ಮತ್ತು 7 ರಂದು ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯವೊಂದು ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಲು ಇಲ್ಲಿನ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ತೀರ್ಮಾನಿಸಿದೆ.
0
samarasasudhi
ಏಪ್ರಿಲ್ 30, 2022
ವಾರಾಣಸಿ: ತನ್ನ ಆವರಣದೊಳಗೆ ಮೇ 6 ಮತ್ತು 7 ರಂದು ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯವೊಂದು ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಲು ಇಲ್ಲಿನ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ತೀರ್ಮಾನಿಸಿದೆ.
ಮಸೀದಿಯೊಳಗೆ ಪ್ರವೇಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಇಂತಜಾಮಿಯಾ ಮಸೀದಿ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್‌ಎಂ.ಯಾಸಿನ್ ಶನಿವಾರ ತಿಳಿಸಿದ್ದಾರೆ.
ಶೃಂಗಾರ ಗೌರಿ ಪೂಜಾ ಪ್ರಕರಣಕ್ಕೆ ಸಂಬಂಧಿಸಿ ವಾರಾಣಸಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರು ಈದ್ ಹಬ್ಬದ ನಂತರ ಮತ್ತು ಮೇ 10 ರೊಳಗೆ ಕಾಶಿ ವಿಶ್ವನಾಥ ಮಂದಿರ- ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವಂತೆ ಏಪ್ರಿಲ್ 26 ರಂದು ಆದೇಶಿಸಿದ್ದರು.
ವಿಡಿಯೊ ಚಿತ್ರೀಕರಣದ ವೇಳೆ ಅಡ್ವೊಕೇಟ್ ಕಮಿಷನರ್, ಎರಡೂ ಕಡೆಯ ಕಕ್ಷಿದಾರರು ಮತ್ತು ಒಬ್ಬ ಸಹಾಯಕ ಮಾತ್ರ ಇರಬಹುದು ಎಂದು ತಿಳಿಸಲಾಗಿತ್ತು.
ಜ್ಞಾನವಾಪಿ ಮಸೀದಿಯ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ದಿನಾ ಪೂಜೆ ನೆರವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್ 21ರಂದು ಈ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.